ಸುಳ್ಯ: ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಮತದಾನ ಶೇಖಡಾ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಇದು ಫಲಿತಾಂಶದ ಮೇಲಿನ ಕುತೂಹಲ ಹೆಚ್ಚಿಸಿದೆ.ಈ ಬಾರಿ ಶೇ.78.94 ಮತದಾನವಾಗಿದೆ. 81,401 ಪುರುಷರು ಹಾಗೂ 81,235 ಮಹಿಳೆಯರು ಸೇರಿ1,62,636 ಮಂದಿ ಮತ ಚಲಾಯಿಸಿದ್ದಾರೆ. ಕಳೆದ ಬಾರಿಗಿಂತ ಶೇ.6.16 ಮತ
ಚಲಾವಣೆ ಕಡಿಮೆಯಾಗಿದೆ. 2018ರಲ್ಲಿ ಶೇ.85.6 ಮತದಾನ ದಾಖಲಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ 26 ಸಾವಿರಕ್ಕೂ ಹೆಚ್ಚು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2013 ರಲ್ಲಿ ಶೇ.82 ಮತದಾನ ದಾಖಲಾಗಿತ್ತು. ಅಂದು 1373 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಅಂಗಾರ ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರ ವಿರುದ್ಧ ಗೆಲುವು ಸಾಧಿಸಿದ್ದರು.ಈ ಬಾರಿ ಶೇಖಡಾವಾರು ಮತದಾನ ಕುಸಿತ ಯಾರಿಗೆ ಅನುಕೂಲ ಆಗಲಿದೆ, ಫಲಿತಾಂಶದ ಮೇಲೆ ಯಾವ ಪರಿಣಾಮ ಉಂಟಾಗಲಿದೆ ಎಂಬ ಲೆಕ್ಕಾಚಾರ, ಚರ್ಚೆಗಳು ಆರಂಭವಾಗಿದೆ. ಯಾರು ಗೆಲ್ಲುತ್ತಾರೆ, ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಿದೆ.
ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಮಧ್ಯೆ ನೇರ ಸ್ಪರ್ಧೆ ಇದ್ದರೂ ಇತರ ಅಭ್ಯರ್ಥಿಗಳು ಪಡೆಯುವ ಮತಗಳು ಸೋಲು-ಗೆಲುವಿನ ಮೇಲೆ ಹಾಗೂ ಬಹುಮತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಾಳಯ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಭಾಗೀರಥಿ ಮುರುಳ್ಯ ಮೂಲಕ ಬಿಜೆಪಿ ಏಳನೇ ಬಾರಿ ಗೆಲುವಿನ ನಗೆ ಬೀರುತ್ತದೆಯಾ ಅಥವಾ ಸುದೀರ್ಘ 29 ವರ್ಷಗಳ ಅಧಿಕಾರದ ಬರವನ್ನು ನೀಗಿಸಿ ಜಿ.ಕೃಷ್ಣಪ್ಪ ಕಾಂಗ್ರೆಸ್ನ ಗೆಲುವಿನ ಪತಾಕೆ ಹಾರಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ. ಮೇ.13 ರಂದು ಮತ ಎಣಿಕೆ ನಡೆಯಲಿದ್ದು ಅಲ್ಲಿಯ ತನಕ ಕುತೂಹಲ ಮುಂದುವರಿಯಲಿದೆ.