ಸುಳ್ಯ:ಸುಳ್ಯ ಹಳೆಗೇಟಿನ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 24 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದ ಸಮಾರೋಪ ಸಮಾರಂಭ ಹಾಗೂ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ.19ರಂದು ಅ.3ರಿಂದ ನಡೆಯಲಿದೆ ಎಂದು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸತತ 24 ವರ್ಷಗಳಿಂದ ವೇದ
ಶಿಬಿರ ನಡೆಯುತ್ತಿದ್ದು ಏ.21ರಿಂದ ಆರಂಭಗೊಂಡ ಶಿಬಿರ ಮೇ.19ರಂದು ಸಮಾಪನಗೊಳ್ಳಲಿದೆ. ಕೇಶವ ಕಿರಣ ಸಭಾಂಗಣದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸುಳ್ಯದ ಶ್ರೀ ರಾಘವೇಂದ್ರ ಮಠದ ಅಧ್ಯಕ್ಷರಾದ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದ್ವೇಶ ಡಾ. ಮುರಳಿ ಮೋಹನ ಚೂಂತಾರು
ಅವರು ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡುವರು. ಖ್ಯಾತ ಯಕ್ಷಗಾನ ಅರ್ಥದಾರಿ ಉಜಿರೆ ಅಶೋಕ ಭಟ್ ಅಭಿನಂದನೆ ಹಾಗೂ ಸಮಾರೋಪ ಭಾಷಣ ಮಾಡಲಿದ್ದಾರೆ. ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಗೋಪಾಲಕೃಷ್ಣ ವಗೆನಾಡು ಉಪಸ್ಥಿತರಿರುವರು ಎಂದು ಅವರು ಹೇಳಿದರು.
ಕೇಶವ ಸ್ಮೃತಿ ಪ್ರಶಸ್ತಿ:
ವೇದ, ಯೋಗ ಹಾಗೂ ಕಲಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ
ಪ್ರತಿಷ್ಠಾನದ ವತಿಯಿಂದ ನೀಡುವ ಕೇಶವ ಸ್ಮೃತಿ ಪ್ರಶಸ್ತಿ ಪುರಸ್ಕಾರವನ್ನು ಸಮಾರಂಭದಲ್ಲಿ ಪ್ತದಾನ ಮಾಡಲಾಗುವುದು. ವೇದ ವಿದ್ವಾಂಸರಾದ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಕಾರಂತ ಅವರಿಗೆ ವೇದ ಸ್ಮೃತಿ,
ಯೋಗ ಶಿಕ್ಷಕರಾದ ಸಂತೋಷ್ ಮುಂಡಕಜೆ ಅವರಿಗೆ ಯೋಗ ಸ್ಮೃತಿ ಹಾಗೂ ಸಂಗೀತ ಶಿಕ್ಷಕಿ ರೇಖಾ ರೇವತಿ ಹೊನ್ನಡಿ ಅವರಿಗೆ ಕಲಾ ಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ಎಂದು ಅವರು ತಿಳಿಸಿದರು.
ಸುಬ್ರಹ್ಮಣ್ಯ ಕಾರಂತ,ರೇಖಾ ರೇವತಿ ಹೊನ್ನಡಿ,ಸಂತೋಷ್ ಮುಂಡಕಜೆ
207 ವಿದ್ಯಾರ್ಥಿಗಳು:
ಕರ್ನಾಟಕ, ಕೇರಳ ಸೇರಿ ವಿವಿಧ ರಾಜ್ಯಗಳಿಂದ ಆಗಮಿಸಿದ ಶಿಬಿರದಲ್ಲಿ 207 ಮಂದಿ ವಿದ್ಯಾರ್ಥಿಗಳು ಈ ವರ್ಷದ ಶಿಬಿರದಲ್ಲಿ ಭಾಗವಹಿಸಿದ್ದರು.
ತಿಂಗಳ ಕಾಲ ನಡೆದ ಉಚಿತ ಶಿಬಿರದಲ್ಲಿ ವೇದಾಧ್ಯಯನ- ಯೋಗಾಭ್ಯಾಸದೊಂದಿಗೆ ರಂಗಪಾಠ, ಮೂಕಾಭಿನಯ, ಬಣ್ಣದ ಹೂಗಳು, ಆರೋಗ್ಯ ಮಾಹಿತಿ, ಯಕ್ಷಗಾನ, ರಂಗಗೀತೆಗಳು, ಶ್ರೀ ಪೂಜಾ ಪ್ರಯೋಗ ಪಾಠ ಪ್ರಾತ್ಯಕ್ಷಿಕೆ, ರಂಗಾಭಿನಯ, ಮುಖವಾಡ, ಭಜನೆ, ಈಜು ತರಬೇತಿ, ಜಾದೂ, ವ್ಯಂಗ್ಯ ಚಿತ್ರ,ಗೊಂಬೆ ತಯಾರಿ, ಜಾನಪದ ನೃತ್ಯ, ಪೋಲೀಸ್ ಮಾಹಿತಿ,ನಾಟಕ, ಮಿಮಿಕ್ರಿ ಚಿತ್ರಕಲೆ, ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಕಸದಿಂದ ರಸ, ಹಾವು ನಾವು ಪರಿಸರ ಪ್ರಾತ್ಯಕ್ಷಿಕೆ, ಹಾಡು-ಕುಣಿತ,
ಗೀತ-ಗಾನ-ಸಾಹಿತ್ಯ ಹೀಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ವಸತಿ, ಊಟ, ಉತ್ತರೀಯ, ವಸ್ತ್ರ, ಪುಸ್ತಕಗಳನ್ನು ನೀಡಲಾಗಿದೆ ಎಂದು ನಾಗರಾಜ ಭಟ್ ಮಾಹಿತಿ ನೀಡಿದರು.
ಯೋಗ ಶಿಬಿರದ ಬಗ್ಗೆ ಒಂದಿಷ್ಟು:
ವೇದಗಳು ಪ್ರಾಚೀನ ಕಾಲದಿಂದಲೇ ಈ ನಾಡಿನುದ್ದಕ್ಕೂ ಹರಿಯುತ್ತಿರುವ ನಿತ್ಯ ನಿರಂತರ ಸಾಂಸ್ಕೃತಿಕ ಪ್ರವಾಹ! ವೇದ ಸಾಹಿತ್ಯವು ಮಾನವೀಯ ಮೌಲ್ಯಗಳ ಗರ್ಭ, ಪರಂಪರೆಯ ಆಸ್ತಿ. ವೇದೋಪನಿಷತ್ತುಗಳ ಆಲೋಚನೆಗಳು ಮನಸ್ಸಿನ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸುವ ಅಂತರಗಂಗೆ, ವೇದಗಳ ಆಳದಲ್ಲಿ ಘನತೆವೆತ್ತ ಭಾರತದ ಪರಿಚಯವಿದೆ. ಭಾವೀ ಭಾರತದ ಸೂರ್ಯ ಸ್ಪಷ್ಟ ನೋಟವಿದೆ. ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಭಾರತವನ್ನು ತಲೆಯೆತ್ತಿ ನಿಲ್ಲುವಂತೆ ಮಾಡುವ ಸ್ವಾಭಿಮಾನದ ಪಾಠವಿದೆ! ಆದುದರಿಂದ ವೇದಗಳು ರಾಷ್ಟ್ರಜೀವನದ ಅವಿಭಾಜ್ಯ ಅಂಗ. ವೇದಗಳಲ್ಲಿರುವ ಒತ್ತಕ್ಷರಗಳು, ಅಲ್ಪಪ್ರಾಣ, ಮಹಾಪ್ರಾಣಗಳು, ದೀರ್ಘ ಹ್ರಸ್ವಗಳು, ಸಂಧಿಗಳು, ಅಲಂಕಾರಗಳು, ಉದಾತ್ತ ಅನುದಾತ್ತ ಸ್ವರಿತಗಳು ಮೊದಲಾದ ವ್ಯಾಕರಣಬದ್ಧ ಸಂಗತಿಗಳು ಜಗತ್ತಿನ ಯಾವ ವಿಶ್ವವಿದ್ಯಾನಿಲಯಗಳಲ್ಲೂ ಸಿಗದ ಭಾಷಾ ಪ್ರೌಢಿಮೆಯನ್ನು ತಂದು ಕೊಡುವುದರಲ್ಲಿ ಸಂದೇಹವಿಲ್ಲ. ಆದುದರಿಂದ ವೇದಗಳಲ್ಲಿ ಹಿಡಿತ ಸಾಧಿಸಿದವನ ಮಾತುಗಳಲ್ಲಿ ಸಾಹಿತ್ಯ ಸೌಂದರ್ಯವು ಮೈಗೂಡಿಕೊಂಡು ಕಾಂತೀಯ ಸೆಳೆತವು ಬೆರೆತುಕೊಳ್ಳುತ್ತದೆ, ಒಂದು ತಿಂಗಳ ವೇದ
ಶಿಬಿರವೆಂಬುದು ಹತ್ತಾರು ವರುಷಗಳೇ ಬೇಕಾದ ಈ ವೇದಮಂತ್ರಗಳ ಕಲಿಕೆಯ ಒಂದು ಝಲಕ್ ಮಾತ್ರ. ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ’ವು 24 ವರುಷಗಳಿಂದ ನಡೆಸುತ್ತಿರುವ ವೇದ-ಯೋಗ-ಕಲಾ ಶಿಬಿರವು ಋಷಿ ಕಾಲದ ಗುರುಕುಲದ ಮಾದರಿಯನ್ನೂ ಪರಿಚಯಿಸುತ್ತದೆ. ಕಾಲದ ವಾಯುವೇಗದ ಬೆಳವಣಿಗೆಗಳಿಗೂ ಪರಂಪರೆಗೆ ಗಾಯವಾಗದ ರೀತಿಯಲ್ಲಿ ಒಗ್ಗಿಕೊಳ್ಳುತ್ತದೆ. ವೇದ ಮಂತ್ರಗಳ ಅನುರಣನಗಳ ನಡುವೆ ಸಾವಿರಾರು ವರುಷಗಳ ಹಿಂದಿನ ಭಾರತದ ದರ್ಶನವನ್ನು ಮಾಡಿಕೊಳ್ಳುವ ಮಕ್ಕಳು ಒಮ್ಮೊಮ್ಮೆ ಆಧುನಿಕ ಬೇಸಿಗೆ ಶಿಬಿರಗಳ ಹಾಡು – ಕುಣಿತ, ರಂಗಭೂಮಿ, ಚಿತ್ರಕಲೆ, ಅಭಿನಯಗೀತೆಗಳು, ಜಾದೂ, ಪೇಪರ್ ಕಟ್ಟಿಂಗ್ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುತ್ತಾ ಹಾಡುತ್ತಾರೆ, ಕುಣಿಯುತ್ತಾರೆ. ಸಂಭ್ರಮಿಸಿದ್ದಾರೆ. ಮತ್ತೊಮ್ಮೆ ಯಕ್ಷಗಾನದ ಭೂಮಿಯಲ್ಲಿ ರಾಮಾಯಣ ಮಹಾಭಾರತಗಳನ್ನು ನೆನಪಿಸಿಕೊಳ್ಳುತ್ತಾರೆ. ಯೋಗಾಸನ, ಪ್ರಾಣಾಯಾಮಗಳ ಮೂಲಕ ಭಾರತೀಯ ಜೀವನಪದ್ಧತಿಯ ಆರೋಗ್ಯಕರ ಬದುಕಿನ ಪಯಣವನ್ನೂ ಸಂಕಲ್ಪಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೊಸಚಿಗುರಿನ ಮೂಲಕ ಹಳೆಬೇರಿನ ಹಿರಿಮೆಯನ್ನು ಸಾರಿ ಹೇಳುವ ವಿಭಿನ್ನ ಆಯಾಮ ನಮ್ಮ ಪ್ರತಿಷ್ಠಾನದ ಆಯ್ಕೆ, ಇದುವರೆಗೂ ನಮ್ಮಲ್ಲಿ ತಯಾರಾದ ಸಾವಿರಾರು ವಿದ್ಯಾರ್ಥಿಗಳೇ ಶಿಬಿರದ ಬಗೆಗಿನ ಇನ್ನಷ್ಟು ಸಂಗತಿಗಳಿಗೆ ನಿರೂಪಣೆ, ಸಂಪೂರ್ಣ ಅಧ್ಯಯನದೊಂದಿಗೆ ಸಮಾಜಮುಖಿಗಳಾಗಿರುವ ವೈದಿಕ ವಿದ್ವಾಂಸರು, ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಕಲಾವಿದರು ಮತ್ತು ನಾಲ್ಕು ಒಳ್ಳೆಯ ನಗುಮುಖದ ಮಾತುಗಳೊಂದಿಗೆ ಪ್ರತಿಷ್ಠಾನದ ಪ್ರತೀ ಹೆಜ್ಜೆಯನ್ನೂ ಪ್ರೋತ್ಸಾಹಿಸುತ್ತಿರುವ ಸಮಾಜದ ಸಜ್ಜನಬಳಗವೇ ಶಿಬಿರವನ್ನು ಸಂಪೂರ್ಣ ಉಚಿತವಾಗಿ ಮಕ್ಕಳಿಗೆ ಸಮರ್ಪಿಸಲು ಧೈರ್ಯ ತುಂಬುವ ಸಂಪನ್ಮೂಲ ಎಂದು ನಾಗರಾಜ ಭಟ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ವೇದ ಗುರು ಸುದರ್ಶನ್ ಭಟ್ ಉಜಿರೆ, ವೇದ ಶಿಬಿರದ ಸಂಚಾಲಕರಾದ ಅಭಿರಾಮ ಶರ್ಮ ಸರಳಿಕುಂಜ, ಪ್ರತಿಷ್ಠಾನದ ಪ್ರಬಂಧಕಿ ಅಕ್ಷತಾ ಹಳೆಗೇಟು ಉಪಸ್ಥಿತರಿದ್ದರು.