ಸುಳ್ಯ: ಸುಳ್ಯ ನಗರ ಪಂಚಾಯತ್ನ ತ್ಯಾಜ್ಯ ವಿಲೇವಾರಿ ವಿಚಾರ ಮತ್ತು ಕಸ ನಿರ್ವಹಣೆ ಕುರಿತು ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆಗೆ ಗ್ರಾಸವಾಯಿತು. ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆಯಲ್ಲಿ ನಗರ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.ಸುಳ್ಯ ನಗರದ ತ್ಯಾಜ್ಯವನ್ನು ಸುರಿಯುವ ಕಲ್ಚರ್ಪೆ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಇದರಿಂದ ಸಮಸ್ಯೆ ಉದ್ಭವವಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಆಗುತ್ತಿದೆ. ಅಧಿಕಾರಿಗಳು ಸರಿಯಾದ ರೀತಿಯಲ್ಲಿ
ಕಲ್ಚರ್ಪೆಗೆ ಹೋಗಿ ನಿರ್ದೇಶನ ನೀಡದೇ ಸಮಸ್ಯೆ ಆಗುತ್ತಿದೆ. ನಗರದ ತ್ಯಾಜ್ಯ ನಿರ್ವಹಣೆಗೆ ನ.ಪಂ. ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ನ.ಪಂ. ಸದಸ್ಯ ವಿನಯ ಕುಮಾರ್ ಕಂದಡ್ಕ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮಾತನಾಡಿ, ಕಲ್ಚರ್ಪೆಯಲ್ಲಿ ಈಗಾಗಲೇ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಅಲ್ಲಿಯೇ ಸಮರ್ಪಕವಾಗಿ ಅಲ್ಲಿನ ಸ್ಥಳೀಯರಿಗೂ, ಪರಿಸರಕ್ಕೂ ಯಾವುದೇ ಸಮಸ್ಯೆ ಆಗದಂತೆ ತ್ಯಾಜ್ಯ ವಿಲೇವಾರಿ ನಡೆಸುವ ಬಗ್ಗೆ ಯೋಜನೆ ರೂಪಿಸಬಹುದು. ಆದರೆ ತ್ಯಾಜ್ಯ ನಿರ್ವಹಣೆ ಕ್ರಮ ಸರಿಯಾಗಿರಬೇಕು ಎಂದು ಸಲಹೆ ನೀಡಿದರು. ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ, ಮೊನ್ನೆ ಶಾಸಕರ ನೇತೃತ್ವದಲ್ಲಿ ಕಲ್ಚರ್ಪೆಯ ತ್ಯಾಜ್ಯ ಸಮಸ್ಯೆ ಬಗ್ಗೆ ನಡೆಸಿದ ಸಭೆಯಲ್ಲಿ ತ್ಯಾಜ್ಯ ನಿರ್ವಹಣೆಗೆ ಬೇರೆ ಜಾಗ ಹುಡುಕುತ್ತೇವೆ ಎಂದು ನಿರ್ಣಯ ಮಾಡಿರುವುದು ಏನಾಯಿತು ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸುವ ಎಂದು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ನಗರ ಪಂಚಾಯಿತಿ ಸೇರಿದಂತೆ ಕಛೇರಿಗಳಲ್ಲಿ ಬ್ರೋಕರ್ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ಬಾರೀ ಚರ್ಚೆ ನಡೆಯಿತು. ಬ್ರೋಕರ್ ದಂಧೆ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಯಿತು. ನಗರ ಪಂಚಾಯತ್ ಕಛೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಬ್ರೋಕರ್ಗಳ ಮೂಲಕ ನಡೆಯುತ್ತಿದ್ದು, ಇದು ಸದಸ್ಯರ ಗಮನಕ್ಕೂ ಬರುತ್ತಿಲ್ಲ. ಇದರಿಂದ ನಗರ ಪಂಚಾಯಿತಿಗೆ ಕೆಟ್ಟ ಹೆಸರು ಬರುತ್ತಿದೆ. ಸಾಮಾನ್ಯ ಜನರು ತಮ್ಮ ಕೆಲಸ ಕಾರ್ಯಗಳಿಗೆ ಇನ್ನಿತರರನ್ನು ಆಶ್ರಯಿಸಿದರೆ, ಹೆಚ್ಚಾಗಿ ಬ್ರೋಕರ್ ಎಂಬುದು ದಂಧೆ ರೀತಿಯಂತೆ ನಡೆಯುತ್ತಿದೆ. ಬ್ರೋಕರ್ ಹಾವಳಿ ತಪ್ಪಿಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪಗೊಂಡಿತು. ಬ್ರೋಕರ್ ಹಾವಳಿ ಭ್ರಷ್ಟಾಚಾರಕ್ಕೂ ಕಾರಣವಾಗುತ್ತಿದೆ. ಕೆಲ ಅಧಿಕಾರಿಗಳು ಬ್ರೋಕರ್ ಮೂಲಕ ಬರುವ ಫೈಲ್ಗಳನ್ನು ಮಾತ್ರವೇ ವಿಲೇ ಮಾಡುವ ಹಂತಕ್ಕೆ ತಲುಪುವ ಭೀತಿಯೂ ಸಭೆಯಲ್ಲಿ ವ್ಯಕ್ತವಾಯಿತು.
ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕೆಲಸ, ನಾಗರಿಕರಿಗೆ ಸವಲತ್ತು ನೀಡುವುದಿದ್ದರೂ ಅದನ್ನು ಆಯಾ ವಾರ್ಡ್ ಸದಸ್ಯರ ಗಮನಕ್ಕೆ ಕಡ್ಡಾಯವಾಗಿ ಅಧಿಕಾರಿಗಳು, ಸಿಬ್ಬಂದಿಗಳು ತರಬೇಕು. ಆದರೆ ಇದು ನಡೆಯುತ್ತಿಲ್ಲ ಎಂದು ಅಧ್ಯಕ್ಷರು, ಸದಸ್ಯರು ಆರೋಪಿಸಿದರು.
ವಾರ್ಡ್ನಲ್ಲಿ ಯಾವ ಕೆಲಸ ಆಗಬೇಕು, ಸವಲತ್ತು ಇಂತಹವರಿಗೆ ನೀಡಿ ಎಂಬುದನ್ನು ತಿಳಿಸುವ ಸದಸ್ಯರಿಗೆ ಕೆಲಸ ಮಾಡುವ ವೇಳೆ, ಸವಲತ್ತು ವಿತರಿಸುವ ವೇಳೆ ಮಾಹಿತಿ ನೀಡದೇ ಇರುವುದು ಸರಿಯಲ್ಲ ಎಂದರು ಸದಸ್ಯರು ಅಭಿಪ್ರಾಯ ತಿಳಿಸಿದರು. ಮುಂದೆ ಎಲ್ಲಾ ಕೆಲಸಗಳ ಬಗ್ಗೆ ಆಯಾ ವಾರ್ಡ್ನ ಸದಸ್ಯರಿಗೆ ಮಾಹಿತಿ ನೀಡುವಂತೆ ಒತ್ತಾಯಿಸಲಾಯಿತು.
ಮನೆ ದುರಸ್ತಿ, ಪಕ್ಕಾ ಮನೆ ರಚನೆ ಸಂಬಂಸಿದಂತೆ ಅನುದಾನ ಹಂಚಿಕೆ ವಿತರಣ ಸಂಬಂಸಿದಂತೆ ಮಾತನಾಡಿದ ಸದಸ್ಯ ಎಂ.ವೆಂಕಪ್ಪ ಗೌಡ ಅವರು, ಸರಕಾರದ ಸವಲತ್ತುಗಳನ್ನು ಪಡೆದುಕೊಂಡವರೇ ಮತ್ತೆ ಮತ್ತೆ ಅರ್ಜಿ ಹಾಕಿ ಪಡೆದುಕೊಳ್ಳುತ್ತಿರುತ್ತಾರೆ. ಆದರೆ ಅವಶ್ಯಕತೆ ಇರುವವರಿಗೆ, ಸವಲತ್ತು ಸಿಗದೇ ಇರುವವರಿಗೆ, ಹೊಸ ಫಲಾನುಭವಿಗಳಿಗೆ ಸರಕಾರಿ ಸವಲತ್ತುಗಳನ್ನು ಸಿಗುವಂತೆ ಮಾಡಬೇಕು. ಈ ಬಗ್ಗೆ ನ.ಪಂ. ವತಿಯಿಂದ ಪ್ರಚಾರ ಕೈಗೊಂಡು ಮಾಹಿತಿ ನೀಡುವ ಕೆಲಸ ಆಗಬೇಕು. ಅರ್ಹರಿಗೆ ಸವಲತ್ತು ಸಿಗಬೇಕು ಎಂದರು. ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ಆಯಾ ವಾರ್ಡ್ಗಳ ಸದಸ್ಯರ ಗಮನಕ್ಕೂ ತನ್ನಿ ಎಂದರು. ಸವಲತ್ತು ಎಲ್ಲರಿಗೂ ಹಂಚಿಕೆಯಾಗುವ ಕ್ರಮ ಅನುಷ್ಠಾನಕ್ಕೆ ತರುವ ಎಂದು ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಭರವಸೆ ನೀಡಿದರು.
ನಗರ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿ ಅವರಿಗೆ ವಾಹನ ವ್ಯವಸ್ಥೆ ಇದ್ದು, ಇದರಲ್ಲಿ ಮುಖ್ಯಾಧಿಕಾರಿ ಎಂದು ಬರೆಯಲಾಗಿದೆ. ಈ ಹಿಂದೆ ಒಮ್ಮೆ ಅಧ್ಯಕ್ಷರು ಎಂದು ಬರೆಯಲಾಗಿತ್ತು. ಆದರೆ ಅದಕ್ಕೆ ನಗರ ಪಂಚಾಯತ್ ಸುಳ್ಯ ಎಂದು ಹೆಸರು ಹಾಕುವುದರಿಂದ ಅಧ್ಯಕ್ಷರ ಓಡಾಟಕ್ಕೂ ಸಹಕಾರಿ ಆಗಲಿದೆ ಎಂದು ಅಧ್ಯಕ್ಷೆ ಶಶಿಕಲಾ ನೀರಬಿದಿರೆ ತಿಳಿಸಿದರು. ಈ ಬಗ್ಗೆ ಸದಸ್ಯರು ಅಧ್ಯಕ್ಷರ ಪರವಾಗಿ ಮಾತನಾಡಿ, ಮಹಿಳಾ ಅಧ್ಯಕ್ಷರು ಆಗಿರುವುದರಿಂದ ಈಗಿರುವ ಕಾರಿನಲ್ಲಿ ಅಧ್ಯಕ್ಷರ ಓಡಾಟಕ್ಕೂ ಅವಕಾಶ ನೀಡಬೇಕು ಎಂದರು. ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ನ.ಪಂ.ಗೆ ಮುಖ್ಯಾಧಿಕಾರಿ ಬಳಕೆಗೆ ವಾಹನ ಇದೆ. ಅಧ್ಯಕ್ಷರ ಬಳಕೆಗೂ ವಾಹನ ಬಳಸುವ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಮಾಡಿ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ ಎಂದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಬೀದಿಬದಿ ವ್ಯಾಪಾರಸ್ಥರ ಸಮಸ್ಯೆ ಬಗ್ಗೆ ಪ್ರತ್ಯೇಕ ಸಭೆ ನಡೆಸುವ ಬಗ್ಗೆ, ಅಪಾಯಕಾರಿ ಮರ ತೆರವು ಮಾಡುವ ಬಗ್ಗೆ, ಹೆದ್ದಾರಿ ಹೊಂಡ-ಗುಂಡಿ ಬಗ್ಗೆ, ಪ್ರತಿಮೆ ಸ್ಥಾಪನೆ ಬಗ್ಗೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷ ಬುದ್ಧ ನಾಯ್ಕ್, ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ, ವಂದಿಸಿದರು.