ಸುಳ್ಯ:ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಅಲೆ ಎಲ್ಲೆಡೆ ಬೀಸುತಿದೆ. ಇದು ಚುನಾವಣೆಯಲ್ಲಿ ಪ್ರತಿಫಲಿಸಲಿದ್ದು ಗ್ಯಾರಂಟಿ ಅಲೆಯಿಂದ ಈ ಬಾರಿ ಕಾಂಗ್ರೆಸ್ ಗೆಲುವು ಸುಲಭವಾಗಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ
ಗ್ಯಾರಂಟಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತಿದೆ. ಕೇಂದ್ರ ಚುನಾವಣಾ ಪ್ರಣಾಳಿಕೆಯಲ್ಲಿಯೂ 5 ಗ್ಯಾರಂಟಿ ಹಾಗೂ 21 ಭರವಸೆಯನ್ನು ನೀಡಿದೆ ಎಂದರು. ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಚುನಾವಣೆಯ ಬಳಿಕ ಜೆಡಿಎಸ್ ನಿರ್ನಾಮ-ಇಕ್ಬಾಲ್ ಎಲಿಮಲೆ:
ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಮಾತನಾಡಿ ಜಾತ್ಯಾತೀತ ಶಕ್ತಿಗಳಿಗೆ ಬಲ ತುಂಬಬೇಕು ಎಂಬ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದೇನೆ ಎಂದರು. ಸುಳ್ಯ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ನಲ್ಲಿ ಬೆರಳೆಣಿಕೆಯ ನಾಯಕರು ಮಾತ್ರ ಉಳಿದಿದ್ದಾರೆ. ಕಾರ್ಯಕರ್ತರು ಯಾರೂ ಇಲ್ಲ, ಆದುದರಿಂದ ಜೆಡಿಎಸ್ ಬಿಜೆಪಿ ಸೇರಿದರೂ ಅವರಿಗೆ ಏನೂ ಲಾಭ ಇಲ್ಲಾ ಎಂದು ಹೇಳಿದರು.ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಜೆಡಿಎಸ್ ನಿರ್ನಾಮ ಆಗಲಿದೆ. ಜೆಡಿಎಸ್ ಸ್ಪರ್ಧಿಸುವ ಮೂರು ಕ್ಷೇತ್ರದಲ್ಲಿ ಸೋಲನುಭವಿಸಲಿದೆ ಎಂದು ಹೇಳಿದರು. ಜೆಡಿಎಸ್ನಲ್ಲಿ ಈಗ ಜಾತ್ಯಾತೀತತೆ ಉಳಿದಿಲ್ಲ, ಆದುದರಿಂದ ಜೆಡಿಎಸ್ನಲ್ಲಿರುವ ಜಾತ್ಯಾತೀತ ನಾಯಕರು ಕಾಂಗ್ರೆಸ್ ಸೇರಿ ಎಂದು ಅವರು ಕರೆ ನೀಡಿದರು.
ಬಿಜೆಪಿ ಸೋಲಿಸುವುದು ಗುರಿ:ಉಮ್ಮರ್
ಸುಳ್ಯ ನಗರ ಪಂಚಾಯತ್ನಿಂದ ಹಿಡಿದು ರಾಜ್ಯ, ರಾಷ್ಟ್ರ ತನಕ ಎಲ್ಲೆಡೆ ಬಿಜೆಪಿಯನ್ನು ಸೋಲಿಸುವುದು ಗುರಿ. ಅದಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ನ.ಪಂ ಸದಸ್ಯ ಕೆ.ಎಸ್.ಉಮ್ಮರ್ ಹೇಳಿದ್ದಾರೆ. ಸುಳ್ಯ ನಗರ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು 600 ಮಂದಿ ಫಲಾನುಭವಿಗಳು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಆದುದರಿಂದ ಸ್ಥಳೀಯಾಡಳಿತದಿಂದ ಹಿಡಿದು ನಾಡಿನ ಅಭಿವೃದ್ಧಿಗೆ, ಸಂವಿಧಾನದ ಉಳಿವಿಗೆ ಬಿಜೆಪಿಯಿಂದ ಆಡಳಿತ ಬದಲಾಗಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಎ.ಮಹಮ್ಮದ್, ಸಿದ್ದಿಕ್ ಕೊಕ್ಕೊ, ಮಹಮ್ನದ್ ಫವಾಝ್ ಉಪಸ್ಥಿತರಿದ್ದರು.