*ಬರಹ:ಗಂಗಾಧರ ಕಲ್ಲಪಳ್ಳಿ/ಶಿಲ್ಪಾ.ಸಿ.ಎಚ್.
ಸುಳ್ಯ: ಅಲೆಗಡಲಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ, ಪ್ರಕೃತಿಯಲ್ಲಿ ಅಲೆ ಅಲೆಯಾಗಿ ತಂಗಾಳಿ ಬೀಸುತ್ತಿದ್ದ ವೇಳೆ ಆರಂಭಗೊಂಡ ಸಂಗೀತ ಸಾಗರದ ನಾದ ತರಂಗದ ಅಲೆಯಲ್ಲಿ ಸಂಗೀತಾಸಕ್ತರು ಅಕ್ಷರಷಃ ತೇಲಿ ಹೋದರು. ಶುದ್ಧ ಸಂಗೀತದ ರಸದೌತಣ ಉಣಬಡಿಸಿದ ಸಂಗೀತ ವಿದ್ವಾನ್ ಟಿ.ಎಸ್.ಪಟ್ಟಾಭಿರಾಮ ಪಂಡಿತ್ ಅವರು ಹರಿಸಿದ ರಾಗ ಸುಧೆ ಸಂಗೀತ ಪ್ರಿಯರನ್ನು ಮೋಡಿ ಮಾಡಿತು. ವಿದ್ವಾನ್ ಕಾಂಚನ ಈಶ್ವರ ಭಟ್ ನೇತೃತ್ವದ ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವತಿಯಿಂದ
ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾ ಭವನದಲ್ಲಿ ಏರ್ಪಡಿಸಿದ ಸಂಗೀತೋತ್ಸವದ ಮುಖ್ಯ ಕಛೇರಿ ಸಂಗೀತ ಪ್ರಿಯರ ಮನದಾಳದಲ್ಲಿ ಬಹುಕಾಲ ಉಳಿಯುವಂತೆ ಮೂಡಿ ಬಂತು. ಕಿವಿ ಇಂಪಾಗಿಸಿದ ಸಂಗೀತ ರಸ ಸಂಜೆ ಹೃದಯ ತಾಳವನ್ನು ಅರಳಿಸಿತು. ಪಟ್ಟಾಭಿರಾಮ ಪಂಡಿತ್ ಅವರ ಹಾಡುಗಾರಿಕೆ ಸಂಗೀತ ವಿದ್ಯಾರ್ಥಿಗಳಿಗೆ ಮತ್ತು ಸಂಗೀತಾಸಕ್ತರಿಗೆ ಹೊಸ ಅನುಭವ ನೀಡಿತು. ಮೂರು ಗಂಟೆಗೂ ಹೆಚ್ಚು ಕಾಲ ಅದ್ಭುತ ಕಂಠಸಿರಿ ಮತ್ತು ಸಂಗೀತದ ಆಳ ಅನುಭವದಿಂದ ಲೀಲಾಜಾಲವಾಗಿ ಸಂಗೀತ ಸುಧೆ ಹರಿಸಿದ ಅವರು ನೆರೆದ ಪ್ರೇಕ್ಷಕರನ್ನು ಸಂಗೀತ ಲೋಕದ ಆಳಕ್ಕೆ ಕರೆದೊಯ್ದರು.
ಬೇಗಡೆ ರಾಗದಲ್ಲಿ ವೀಣಾ ಕುಪ್ಪಯ್ಯರ್ ರಚಿಸಿದ ‘ಇಂತಚಲಮುಜೇಸಿತೆ.. ಎಂಬ ವರ್ಣದೊಂದಿಗೆ ಕಛೇರಿ ಆರಂಭಿಸಿದದರು. ಚರಣದ ಸಾಹಿತ್ಯ ಭಾಗಕ್ಕೆ ಸರ್ವ ಲಘುಗಳ ಸ್ವರ ಪ್ರಸ್ತಾರವು ಉತ್ತಮ ಸ್ವರ ಮಾಧುರ್ಯದ ಪ್ರಾರಂಭವನ್ನೊದಗಿಸಿತು. ಬಳಿಕ ತ್ಯಾಗರಾಜ ಸ್ವಾಮಿಗಳು ರಚಿಸಿದ ಸಿಂಧು ರಾಮಕ್ರಿಯ ರಾಗದ ಆದಿತಾಳದಲ್ಲಿ ಸುಧಾ ಮಾಧುರ್ಯ ಭಾಷಿಣಿ.. ಸುಮಧುರವಾಗಿ ಪ್ರಸ್ತುತಿಗೊಂಡಿತು. ನಂತರ ಆಭೋಗಿ ರಾಗದ ಗೋಪಾಲಕೃಷ್ಣ ಭಾರತಿಯಾರ್ ಅವರು ರಚಿಸಿದ ‘ಸಭಾ ಪತಿಕ್ ವೇರು ದೈವಮು ಸಮಾನಮಾಗುಮಾ’.. ಎಂಬ ಕೃತಿಯು ಲೆಕ್ಕಾಚಾರದ ಸ್ವರ ಪ್ರಸ್ತಾರಗಳನ್ನೊಳಗೊಂಡು ಪ್ರಧಾನ ಕಲಾವಿದರ ಹಾಗು ವಯಲಿನ್ ಕಲಾವಿದರ ಮನೋಧರ್ಮವು ಉತ್ತಮವಾಗಿ ಸಮ್ಮಿಳಿತಗೊಂಡು ರಾಗ, ಲಯ,ತಾಳದ ರಾಗಸುಧೆ ಹರಿಸಿ ನೆರೆದ ಕೇಳುಗರನ್ನು ತಲೆದೂಗಿಸಿದರು.
ಬಳಿಕ ಮುತ್ತುಸ್ವಾಮಿ ದೀಕ್ಷಿತರ ಕೃತಿ ‘ರಂಗನಾಯಕಂ ಭಾವಯೇ’ ನಾಯಕಿ ರಾಗ ಹಾಗು ಆದಿ ತಾಳದಲ್ಲಿ ಭಾವ ಪೂರ್ಣವಾಗಿ ಹಾಡಿ ಮೋಡಿ ಮಾಡಿದರು.ಅಷ್ಟೇ ಗಾಂಭೀರ್ಯದಿಂದ ಮೃದಂಗ ನಡೆಗಳೂ ಹೊರಹೊಮ್ಮಿ ಕೃತಿಯ ಅಂದ ಇನ್ನಷ್ಟು ಹೆಚ್ಚಿಸಿತು. ಸಭಾಂಗಣದಲ್ಲಿ ಚಪ್ಪಾಳೆಯ ಅಲೆ ಸಂಗೀತದ ನಾದದೊಂದಿಗೆ ಮೇಳೈಸಿತು.
ಬಳಿಕ ರವಿಚಂದ್ರಿಕಾ ರಾಗ, ಆದಿ ತಾಳದಲ್ಲಿ ‘ಮಾಕೇಲರಾ ವಿಚಾರಮು’ ದುರಿತ ಗತಿಯಲ್ಲಿ ಪ್ರಸ್ತುತಿಗೊಂಡಿತು. ಪ್ರಧಾನ ರಾಗವಾಗಿ ‘ಮೋಹನವನ್ನು ಆರಿಸಿದ ಪಟ್ಟಾಭಿರಾಮ ಪಂಡಿತರು, ಮೋಹನ ರಾಗದ ಭಾವ, ಒಳಹು-ಹೊರಹುಗಳನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದರು. ಕಲಾವಿದರ ಮನೋಧರ್ಮಕ್ಕನುಸಾರವಾಗಿ ವಿದ್ವಾನ್ ಮೈಸೂರು ವಿ.ಶ್ರೀಕಾಂತ್ ವಯಲಿನ್ನಲ್ಲಿ ಮೋಹನ ರಾಗವನ್ನು ಸಂಗೀತ ಪ್ರಿಯರ ಮನದಲ್ಲಿ ಬಹುಕಾಲ ಉಳಿಯುವಂತೆ ಅದ್ಭುತವಾಗಿ
ಪ್ರಸ್ತುತಪಡಿಸಿದಾಗ ಶುದ್ಧ ಸಂಗೀತದ ಹೊಸತೊಂದು ಲೋಕವೇ ಸೃಷ್ಠಿಯಾಯಿತು.
‘ಮೋಹನ ರಾಮಮೊದಟಿ ದೈವಮಾ’ ಸಾಹಿತ್ಯ ಜಾಗದ ನೆರವಲ್ ಹಾಗು ಸ್ವರ ಪ್ರಸ್ತಾರಗಳು ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ರಾಗದ ಭಾವಕ್ಕನುಗುಣವಾಗಿ ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ನುಡಿಸಿದ ಮೃದಂಗದ ಝೇಂಕಾರ ನಡೆಗಳು, ನಾದಮಯ ನುಡಿ ಸಾಣಿಕೆ ಮತ್ತು ಗಾಂಭೀರ್ಯ ನಡೆಗಳು ಕೃತಿಗೆ ಮತ್ತಷ್ಟು ಮೆರುಗನ್ನು ನೀಡಿ ಕೇಳುಗರನ್ನು ಭಾವಪರವಶರನ್ನಾಗಿಸಿತು.
ಅತ್ಯುತ್ತಮವಾಗಿ ಮೂಡಿ ಬಂದ ತನಿಯಾವರ್ತನದ ಮೂಲಕ ಕೇಳುಗರನ್ನು ಆಸ್ವಾದನೆಯ ಉತ್ತುಂಗಕ್ಕೇರಿಸಿತು. ಉತ್ತಮ ಹೊಂದಾಣಿಕೆಯ ನುಡಿ ಸಾಣಿಕೆಯೊಂದಿಗೆ ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಬೆಂಗಳೂರು ಸಾಥ್ ನೀಡಿದರು.ಬಳಿಕ ದುರ್ಗಾರಾಗದ ರಾಮಂ ಭಜೇ.. ಗಮನಶ್ರಮದ ಗೋಪಿ ಗೋಪಾಲ ಬಾಲ.. ಮಧುವಂತಿಯ ಸರ್ವಂ ಬ್ರಹ್ಮಮಯಂ, ಬೆಹಾಗ್ ರಾಗದ ಕಂಡು ಧನ್ಯನಾದೆ.. ಕೇಳುಗರಲ್ಲಿ ಧನ್ಯತಾ ಭಾವವನ್ನು ಮೂಡಿಸಿತು.. ನಂತರ ಶುಭ ಪಂತುವರಾಳಿ ರಾಗದ ಮೋಸ ಹೋದೆನಲ್ಲೋ ನಾನು ಭಾವಪೂರ್ಣವಾಗಿ ನಿರೂಪಿತವಾಯಿತು. ಅರಿಯಕುಡಿ ರಾಮಾನುಜಯ್ಯಂಗಾರ್ ಅವರ ಕಾನಡ ರಾಗದ ತಿಲ್ಲಾನವು ವಿಶಿಷ್ಟಪೂರ್ಣವಾಗಿ ಮೂಡಿ ಬಂದು ಮಂಗಳದೊಂದಿಗೆ ಸುಮಾರು ಮೂರೂವರೆ ಗಂಟೆಗಳ ಕಾಲ ಕೇಳುಗರನ್ನು ಸಂಗೀತ ಲೋಕದಲ್ಲಿ ತೇಲಾಡಿಸಿದ ಸಂಗೀತ ಕಛೇರಿ ಸಮಾಪನಗೊಂಡಿತು.ಮೋಹಕವಾಗಿ ಪ್ರಸ್ತುತಪಡಿಸಿದ ಕಛೇರಿಗೆ ಪ್ರಸಿದ್ಧ ಕೀರ್ತನೆಗಳನ್ನೇ ಆಯ್ಕೆ ಮಾಡಿ ದೃಢವಾದ ಶಾರೀರದೊಂದಿಗೆ ರಾಗದ ಒಳ ಹೊರಹುಗಳು ಸ್ಪಷ್ಟವಾಗಿ ಗೋಚರಿಸಿದ ಕಛೇರಿ ಅದ್ಭುತ ಸಂಗೀತ ಲೋಕವನ್ನೇ ತೆರೆದಿಟ್ಟಿತು. ಯಾವುದೇ
ಸಂಗೀತ ಕಛೇರಿ ಕೇಳುಗರ ಮನ ಗೆಲ್ಲಲು ಹಾಡುಗಾರನಂತೆ ಪಕ್ಕ ಮೇಳದವರ ಕೊಡುಗೆಯೂ ದೊಡ್ಡದಿದೆ. ತಮ್ಮ ಅದ್ಭುತ ಕಲಾಪಾಂಡಿತ್ಯ , ಸಂಗೀತ ಜ್ಞಾನ ಮತ್ತು ಅನನ್ಯ ಪ್ರತಿಭೆ ಮತ್ತು ಅನುಭವ ಧಾರೆಯೆರೆದ ಹಿಮ್ಮೇಳ ಕಲಾವಿದರು ಕಛೇರಿಯನ್ನು ಮೇರುಸ್ತರಕ್ಕೇರಿಸಿದರು . ಕಲಾವಿದರನ್ನು ಅನುಸರಿಸುತ್ತ ಅದ್ಭುತವಾಗಿ ವಯಲಿನ್ ಮೀಟಿದ ವಿದ್ವಾನ್ ಮೈಸೂರು ವಿ.ಶ್ರೀಕಾಂತ್, ಮತ್ತು ಮೃದಂಗ ವಾದನದಲ್ಲಿ ಸ್ವರ, ರಾಗ, ತಾಳ ಹೊರ ಹೊಮ್ಮಿಸಿದ ವಿದ್ವಾನ್ ಕಾಂಚನ ಎ ಈಶ್ವರ ಭಟ್, ಘಟಂನಲ್ಲಿ ಶರತ್ ಕೌಶಿಕ್ ಸಮರ್ಥವಾಗಿ ಸಾಥ್ ನೀಡಿದರು. ಅದ್ಭುತ ಸಂಗೀತ ರಸಧಾರೆ ಹರಿಸಿದ ಕಲಾವಿದರನ್ನು ಸುನಾದ ಸಂಸ್ಥೆ ವತಿಯಿಂದ ಗೌರವಿಸಲಾಯಿತು.. ಹಲವು ದಶಕಗಳಿಂದ ಸಂಗೀತ ಸೇವೆ, ಸಂಗೀತ ಶಿಕ್ಷಣದ ಮೂಲಕ ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಸುನಾದ ಸಂಗೀತ ಕಲಾ ಶಾಲೆಯ ಸುಳ್ಯದ ಸಂಗೀತೋತ್ಸವ ಸಂಗೀತಾಸಕ್ತರಿಗೆ ಮತ್ತೊಂದು ಕೊಡುಗೆಯಾಯಿತು.