ಸುಬ್ರಹ್ಮಣ್ಯ:ಚಂದ್ರಯಾನ ಯಶಸ್ವಿಯಾಗುವ ಮೂಲಕ ಬ್ಯಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ವಿಶ್ವಗುರುವಾಗಿದೆ. ಚಂದ್ರಯಾನ ೩ ಯಶಸ್ವಿಯಾಗಿರುವುದು ಒಂದು ಐತಿಹಾಸಿಕ ಸಾಧನೆ. ಇಸ್ರೋದ ಈ ಹೆಮ್ಮೆಯ ಯಶಸ್ಸು ವಿದ್ಯಾರ್ಥಿಗಳಿಗೆ ಮತ್ತು ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದು ಎಸ್ಎಸ್ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು. ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಎಸ್ಎಸ್ಪಿಯು ಕಾಲೇಜಿನ
ಆಶ್ರಯದಲ್ಲಿ ಕಾಲೇಜಿನ ರೆಡ್ಕ್ರಾಸ್ ಘಟಕದಿಂದ ಗುರುವಾರ ಆಯೋಜಿಸಿದ್ದ ಚಂದ್ರಯಾನ ೩ ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಸ್ರೋ ಸಾಧನೆಗೆ ಸಂಸ್ಥೆಗೆ ಸರ್ವ ವಿದ್ಯಾರ್ಥಿಗಳು ಆರಂಭದಲ್ಲಿ ಒಕ್ಕೊರಲಿನಿಂದ ಅಭಿನಂದನೆ ಸಲ್ಲಿಸಿದರು.ರೆಡ್ಕ್ರಾಸ್ ವಿದ್ಯಾರ್ಥಿಗಳು ಚಂದ್ರ, ಚಂದ್ರಯಾನವನ್ನು ಚಿತ್ರಕಲೆ ಮೂಲಕ ಬಿಂಬಿಸಿ ರಾಕೆಟ್ನ ಕಲಾಕೃತಿಯನ್ನು ರಚಿಸಿ ಇಸ್ರೋಗೆ ಅಭಿನಂದನೆ ಸಲ್ಲಿಸಿದರು.ಅಲ್ಲದೆ ಕಾಲೇಜಿನ ೧೧೦೮ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರು ಇಸ್ರೋಗೆ ಅಭಿನಂದನೆಗಳನ್ನು ಬರೆದು ಸಹಿ ಹಾಕಿದರು.ಅಲ್ಲದೆ ಈ ಸಂದರ್ಭದಲ್ಲಿ ಭಾರತ್ ಮಾತಾಕಿ ಜೈ ಮತ್ತು ಇಸ್ರೋಗೆ ಜಯಕಾರದ ಘೋಷಣೆಗಳನ್ನು ವಿದ್ಯಾರ್ಥಿಗಳು ಮೊಳಗಿಸಿದರು.
ಈ ಸಂದರ್ಭ ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಸಾಂಸ್ಕೃತಿಕ ಸಂಘದ ಸಂಯೋಜಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘದ ಸಂಯೋಜಕ ಜಯಪ್ರಕಾಶ್ ಆರ್, ರೆಡ್ಕ್ರಾಸ್ ಸಂಯೋಜಕಿ ಶ್ರುತಿ ಯಾಲದಾಳು, ರೋರ್ಸ್ ಮತ್ತು ರೇಂರ್ಸ್ ನಾಯಕಿ ಸವಿತಾ ಕೈಲಾಸ್, ನಾಯಕ ಪ್ರವೀಣ್ ಎರ್ಮಾಯಿಲ್, ಎನ್ಎಸ್ಎಸ್ ಯೋಜನಾಧಿಕಾರಿ ಭವ್ಯಶ್ರೀ ಹರೀಶ್ ಕುಲ್ಕುಂದ, ಸ್ಟಾಪ್ ಸೆಕ್ರೇಟರಿ ಗಿರೀಶ್, ವಿಜ್ಞಾನ ಸಂಘದ ಸಂಚಾಲಕ ಯೋಗಣ್ಣ ಎಂ.ಎಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೇತನ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಸಿಬಂದಿಗಳು ಹಾಗೂ ವಿದ್ಯಾರ್ಥಿಗಳು ಯಶಸ್ಸಿನ ಸಂಭ್ರಮದಲ್ಲಿ ಭಾಗವಹಿಸಿದರು.