ಶಿರೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಸಿಲುಕಿದ ಕೇರಳದ ಲಾರಿಯನ್ನು ಹೊರತೆಗೆಯಲು ಮತ್ತು ಚಾಲಕ ಅರ್ಜುನ್ ಪತ್ತೆ ಮಾಡಲು ಸತತ 12 ದಿನಗಳಿಂದ ಪ್ರಯತ್ನ ನಡೆಯುತಿದೆ.ಆದರೆ, ನದಿ ರಭಸವಾಗಿ ಹರಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜುಲೈ 16 ರಂದು ಶಿರೂರಿನಲ್ಲಿ ಗುಡ್ಡ ಕುಸಿತ ಅವಘಡ ಸಂಭವಿಸಿತ್ತು. ಘಟನೆ ನಡೆದ 10 ದಿನದ ಬಳಿಕ
ಲಾರಿಯ ಕ್ಯಾಬಿನ್ ನದಿ ದಡದಿಂದ 60 ಮೀಟರ್ ದೂರ ಮತ್ತು 5 ಮೀಟರ್ ಆಳದಲ್ಲಿ ಸಿಲುಕಿರುವುದು ಡ್ರೋನ್ ತಂತ್ರಜ್ಞಾನ ಆಧಾರಿತ ಶೋಧನ ಯಂತ್ರದಿಂದ ತಿಳಿದಿದೆ. ಆದರೆ, ಚಾಲಕ ಅರ್ಜುನ್ ಸುಳಿವು ಸಿಗಲಿಲ್ಲ. ಕೇರಳದ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ.ಮೊಹಮ್ಮದ್ ರಿಯಾಜ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಕುರಿತು ಚರ್ಚೆ ನಡೆಸಿದ್ದಾರೆ.
ಕೇರಳದ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಬಾಲುಸ್ಸೇರಿ ಶಾಸಕ ಸಚಿನ್ ದೇವ್, ತಿರುವಂಬಾಡಿ ಶಾಸಕ ಲಿಂಡೋ ಜೊಸೆಫ್ ಶಿರೂರಿನಲ್ಲಿ ಬೀಡುಬಿಟ್ಟಿದ್ದಾರೆ. ಕೋಯಿಕ್ಕೋಡ್ ಸಂಸದ ಎಂ.ಕೆ.ರಾಘವನ್ ಭೇಟಿ ನೀಡಿದರು.ಕಾರವಾರ ಶಾಸಕ ಸತೀಶ್ ಸೈಲ್ ಅವರು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ. ಲಾರಿ ಮೇಲಕ್ಕೆತ್ತಲು ನೌಕದಳದ ಮುಳುಗುತಜ್ಞರು ಪ್ರಯತ್ನ ನಡೆಸಿದ್ದಾರೆ. ಆದರೆ, ನದಿಯ ರಭಸ ಪ್ರತಿ ಗಂಟೆಗೆ 6 ರಿಂದ 8 ನಾಟಿಕಲ್ ಮೈಲು ವೇಗವಿದೆ. ಕಾರ್ಯಾಚರಣೆಗೆ ಅಡ್ಡಿಯಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.ಶನಿವಾರವೂ ಕಾರ್ಯಾಚರಣೆ ಮುಂದುವರೆದಿದೆ.