ಬೆಂಗಳೂರು: ಉಪಚುನಾವಣೆ ನಡೆದ ಶಿಗ್ಗಾವಿಯಲ್ಲಿ ಶೇ 80.48, ಸಂಡೂರಿನಲ್ಲಿ ಶೇ 76.24 ಹಾಗೂ ಚನ್ನಪಟ್ಟಣದಲ್ಲಿ ಶೇ 88.80ರಷ್ಟು ಮತದಾನ ದಾಖಲಾಗಿದೆ.ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ, ಸಂಸದ ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾವಿ ಕ್ಷೇತ್ರ ಹಾಗೂ
ಸಂಸದ ಇ. ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಸಂಡೂರು ಕ್ಷೇತ್ರಕ್ಕೆ ಬುಧವಾರ ಉಪ ಚುನಾವಣೆ ನಡೆಯಿತು.
ಉಪಚುನಾವಣೆಯ ಕಣದಲ್ಲಿದ್ದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ದಾಖಲಾಯಿತು. ಚನ್ನಪಟ್ಟಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ಸಿ.ಪಿ. ಯೋಗೇಶ್ವರ್ ಅವರ ವಿರುದ್ಧ ಚೊಚ್ಚಲ ಗೆಲುವಿಗೆ ಕಾದಿರುವ ಕುಮಾರಸ್ವಾಮಿ ಅವರ ಪುತ್ರ, ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಸ್ಪರ್ಧಿಸಿದ್ದಾರೆ.
ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಪಕ್ಷವು ಯಾಸೀರ್ ಅಹ್ಮದ್ ಖಾನ್ ಪಠಾಣ ಅವರನ್ನು ಕಣಕ್ಕಿಳಿಸಿದೆ.
ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ವಿರುದ್ಧ ಬಂಗಾರು ಹನುಮಂತು ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಮೂರೂ ಕ್ಷೇತ್ರಗಳಲ್ಲಿ ಮತ ಎಣಿಕೆ ನ. 23ರಂದು ನಡೆಯಲಿದೆ.