*ಗಂಗಾದರ ಕಲ್ಲಪಳ್ಳಿ.
ಸುಳ್ಯ:ತಿಂಡಿ ತಿನಿಸುಗಳಲ್ಲಿ ವೈವಿಧ್ಯತೆ ಸಾರಿದ ತಿಂಡಿ ಮೇಳವು ರುಚಿಯ ಹೊಸ ಅನುಭವವನ್ನು ಉಣ ಬಡಿಸಿತು.ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ಕಾಂತಮಂಗಲದ ಪಯಸ್ವಿನಿ ತಟದ ಶ್ರೀ ಗುರು ರಾಘವೇಂದ್ರ ಮಠದಲ್ಲಿ ನಡೆದ ತಿಂಡಿ ಮೇಳವು ಪಾಕ ಲೋಕದ ಅದ್ಭುತ ಲೋಕವನ್ನು ತೆರೆದಿಟ್ಟಿತು.ಬಿಸಿ ಬಿಸಿ ತಿಂಡಿ ತಿನಿಸುಗಳು ನೆರೆದ ನೂರಾರು
ಮಂದಿಯ ಬಾಯಿಯನ್ನು ಸಿಹಿಯಾಗಿಸಿ ವೈವಿದ್ಯಮಯ ಖಾದ್ಯಗಳ ರುಚಿಯ ವಿನೂತನ ಅನುಭವ ನೀಡಿತು. ಮಳೆಗಾಲದಲ್ಲಿ ಮನೆ
ಮನೆಗಳಲ್ಲಿ ಮಾಡುವ ವೈವಿಧ್ಯಮಯ ತಿಂಡಿಗಳ ರುಚಿಗಳು ಎಲ್ಲರ ಬಾಯನ್ನೂ ಸಿಹಿಯಾಗಿಸಿ ತಮ್ಮ ಅಡುಗೆಯ ನೈಪುಣ್ಯವನ್ನು ಎಲ್ಲರಿಗೂ ತಿಳಿಸಿಕೊಡಬೇಕು ಮತ್ತು ಕಲಿಸಿ ಕೊಡಬೇಕು ಎಂಬ ಉದ್ದೇಶದಿಂದ ತಿಂಡಿ ಮೇಳವನ್ನು ಏರ್ಪಡಿಸಲಾಗಿತ್ತು. ಶಿವಳ್ಳಿ ಸಂಪನ್ನವು ಪ್ರತಿ ವರ್ಷ ತಿಂಡಿ ಮೇಳವನ್ನು ಏರ್ಪಡಿಸುವುದರ ಮೂಲಕ ಸಾರ್ವಜನಿಕರ ಬಾಯಿಗೆ ರುಚಿಯ ವೈವಿಧ್ಯತೆಯನ್ನು ಸಾರುತ್ತಾರೆ.ಈ ಬಾರಿಯ ತಿಂಡಿ ಮೇಳದಲ್ಲಿ 23 ಕೌಂಟರ್ಗಳಲ್ಲಿ 35ಕ್ಕೂ ಹೆಚ್ಚು ವೈವಿಧ್ಯಮಯ ತಿಂಡಿಗಳನ್ನು ಪ್ರದರ್ಶಿಸಿ
ವಿತರಿಸಲಾಯಿತು. ಒಂದೊಂದು ಕೌಂಟರ್ನಲ್ಲಿಯೂ ಒಂದೊಂದು ಕುಟುಂಬದವರು ತಮ್ಮದೇ ಆದ ವಿಶೇಷ ತಿಂಡಿಗಳನ್ನು ಮಾಡಿ ಪ್ರದರ್ಶಿಸಿ ಉಣ ಬಡಿಸಿದರು.ಅದರ ತಯಾರಿಗೆ ಬಳಸುವ ವಸ್ತುಗಳು ಮತ್ತು ವಿಧಾನವನ್ನು ವಿವರಿಸಿ ಹೇಳುತ್ತಿದ್ದರು.ಪ್ರಾಕೃತಿಕವಾಗಿ ಸಿಗುವ ಫಲವಸ್ತುಗಳಾದ ಹಲಸು,ಬಾಳೆ ಹಣ್ಣು ಗಳಿಂದ ತಯಾರಿಸಿದ ವಿವಿಧ ಖಾದ್ಯಗಳು ಮೇಳದ ಹೈಲೈಟ್ ಆಗಿತ್ತು. ಹಲಸಿನ ಹಣ್ಣು ಮತ್ತು ಕಾಯಿಯಿಂದ ಮಾಡಲಾದ ತಿಂಡಿಗಳು, ಕರಿದ ತಿನಿಸುಗಳು ,
ಬಾಯನ್ನು ಸಿಹಿಯಾಗಿಸಿತು.ಗೂಡಾನ್ನ ಪಾಯಸ, ಬಾಳೆ ಹಣ್ಣಿನ ಪೋಡಿ,ಗೋದಿ ಉಂಡೆ,ಬಾಳೆಹಣ್ಣು ಹಲ್ವ, ಚಿಪ್ಸ್, ಬಿಸ್ಕಟ್ ರೊಟ್ಟಿ,ಮೈಸೂರ್ ಪಾಕ್,ಅಕ್ಕಿ ಸೋಂಟೆ, ಆಲುವಾಡಿ, ಮಿಂಟ್ ಜ್ಯೂಸ್,
ಹಲಸಿನ ಗಟ್ಟಿ, ಕ್ಯಾಬೇಜ್ ಟಿಕ್ಕಿ, ಮ್ಯಾಂಗೋ ಡಿಲೈಟ್, ಕರ್ಜಿಕಾಯಿ, ಕಪ್ ಕೇಕ್, ಟೊಮೇಟೋ ಸ್ಟಿಕ್, ಪೈನಾಪಲ್ ಹಲ್ವ,
ಉಂಡ್ಳಕ, ಜೀಗುಜ್ಜೆ ಪೋಡಿ, ಹಲಸಿನ ಕಟ್ಟಿ, ಸೋಂಟೆ, ಪಚ್ಚಿಲ್, ಅಂಬೊಡೆ,ಜಟ್ ಪಟ್ ಚರುಂಬುರಿ, ಚಾಕಲೇಟ್ 7 ಕಪ್, ಕರದಂಟು, ಚಕ್ಕುಲಿ, ಲೆಮನ್ ಟೀ, ಗಮ್ ಲೆಸ್ ಹಲಸಿನ ಹಣ್ಣು, ಚಕ್ಕುಲಿ, ಕೋಕೋನಟ್ ಬರ್ಪಿ, ಪೊಂಗಲ್, ಅರಿತ್ತ ಪುಡಿ, ಅರಿತ್ತ ವಡೆ, ಗೆಣಸಿನ ಖಾರ ಚಿಪ್ಸ್ ಮತ್ತಿತರರ ತಿಂಡಿ ತಿನಿಸುಗಳು ಜನರ ಬಾಯಿಯನ್ನು ಚಪ್ಪರಿಸುವಂತೆ ಮಾಡಿತ್ತು. ಒಂದೊಂದು ಕುಟುಂಬದವರೂ ಒಂದೊಂದು ಕೌಂಟರ್ನಲ್ಲಿ ಬೇರೆ ಬೇರೆ ತರಹದ ತಿಂಡಿಗಳನ್ನು ಮಾಡಿ ತಮ್ಮ ಕೈಚಳಕವನ್ನು ತೋರ್ಪಡಿಸಿದರು. ತಿಂಡಿಯ ಹೆಸರನ್ನು ಮತ್ತು
ತಯಾರಿಸಲು ಬಳಸುವ ವಸ್ತುಗಳ ಹೆಸರನ್ನು ಪ್ರದರ್ಶಿಸಲಾಗಿತ್ತು. ತಿಂಡಿ ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಲಾಯಿತು . ಶಿವ ಸಂಪನ್ನದ ವತಿಯಿಂದ ಪ್ರತಿ ವರ್ಷವೂ ವೈವಿಧ್ಯಮಯ ತಿಂಡಿ ಮೇಳಗಳನ್ನು ಸಂಘಟಿಸಲಾಗುತ್ತದೆ.
ಬಿಸ್ಕಟ್ ಪೋಡಿಯನ್ನು ಕಾದ ಎಣ್ಣೆಗೆ ಬಿಟ್ಟು ಪೋಡಿ ತಯಾರಿಸುವ ಮೂಲಕ ಕವಿ ಹಾಗೂ ಪ್ರಗತಿಪರ ಕೃಷಿಕರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ ತಿಂಡಿಮೇಳ ಉದ್ಘಾಟಿಸಿದರು.
ನಿವೃತ್ತ ಶಿಕ್ಷಕರಾದ ಗೋಪಾಲರಾವ್ ಮುಖ್ಯ ಅತಿಥಿಯಾಗಿದ್ದರು. ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ಅಧ್ಯಕ್ಷ ರಾಮ್ ಕುಮಾರ್ ಹೆಬ್ಬಾರ್, ಕಾರ್ಯದರ್ಶಿ ರಾಮಚಂದ್ರ ಸೋಮಯಾಗಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಮೂಡಿತ್ತಾಯ, ಶಿವಳ್ಳಿ ಸಂಪನ್ನದ ಯುವ ಸಂಘದ ಅಧ್ಯಕ್ಷ ಅಖಿಲ ಸೋಮಯಾಗಿ, ಮುರಳೀಕೃಷ್ಣ ಕಣ್ಣರಾಯ ಮತ್ತಿತರರು ಉಪಸ್ಥಿತರಿದ್ದರು.