*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಇರುಮುಡಿ ಹೊತ್ತು 580 ಕಿ.ಮಿ ಕಾಲ್ನಡಿಗೆ ಮಾಡಿ ಅಯ್ಯಪ್ಪನ ದರ್ಶನ. ಒಂದಲ್ಲ, ಎರಡಲ್ಲ ನಿರಂತರ 25ನೇ ವರ್ಷವೂ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ. ಸುಳ್ಯದ ಸತೀಶ್ ಗುರುಸ್ವಾಮಿ ಮತ್ತು ತಂಡ ಪ್ರತಿ ವರ್ಷವೂ ಪಾದಯಾತ್ರೆಯ ಮೂಲಕವೇ ಶಬರಿಮಲೆ ಯಾತ್ರೆ ಕೈಗೊಳ್ಳುವುದು ವಿಶೇಷ. ಈ ವರ್ಷ ಸತೀಶ್ ಗುರುಸ್ವಾಮಿ ಮತ್ತು 18ಮಂದಿಯ ತಂಡ ಡಿ.25 ಭಾನುವಾರ ಮುಂಜಾನೆ ಪಾದಯಾತ್ರೆ ಆರಂಭಿಸಿದ್ದಾರೆ. ಶನಿವಾರ ಇರುಮುಡಿ ಕಟ್ಟು ಕಟ್ಟಿ ರಾತ್ರಿ ಕಲ್ಕುಡ ಸನ್ನಿಧಿಯಲ್ಲಿ ವಾಸ್ತವ್ಯ ಮಾಡಿ ಭಾನುವಾರ ಮುಂಜಾನೆ ಕಲ್ಕುಡ
ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಪಾದಯಾತ್ರೆ ಆರಂಭಿಸಿದ್ದಾರೆ. ಪ್ರತಿ ದಿನ 35-40 ಕಿ.ಮಿ.ಪಾದಯಾತ್ರೆ ಕೈಗೊಳ್ಳುತ್ತಾರೆ. ಬೆಳಿಗ್ಗೆ ಮತ್ತು ಸಂಜೆಯ ವೇಳೆಗೆ ಹೆಚ್ಚಾಗಿ ನಡೆಯುತ್ತಾರೆ. ಉಳಿದ ಸಮಯಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ವಿವಿಧ ದೇವಸ್ಥಾನಗಳನ್ನು ಭೇಟಿ ನೀಡಿ ಪ್ರಾರ್ಥಿಸಿ ಯಾತ್ರೆ ಮುಂದುವರಿಯುತ್ತಾರೆ. ಆಹಾರ ಸಾಮಾಗ್ರಿಗಳು, ಪಾತ್ರೆಗಳನ್ನು ಜೊತೆಯಲ್ಲಿ ಕೊಂಡೊಯ್ಯುವ ಇವರು ಸ್ವಂತ ಆಹಾರ ತಯಾರಿಸಿ ಸೇವಿಸುತ್ತಾರೆ. 17 ದಿನಗಳ ಪಾದಯಾತ್ರೆಯಲ್ಲಿ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನ ಸೇರಿ ಮೂವತ್ತಕ್ಕೂ ಅಧಿಕ ದೇವಸ್ಥಾನಗಳನ್ನು ಭೇಟಿ
ಜ.12ರಂದು ಶಬರಿಮಲೆ ಸನ್ನಿಧಿಗೆ ತಲುಪಲಿದ್ದಾರೆ. ಸತೀಶ್ ಗುರುಸ್ವಾಮಿ 37 ವರ್ಷಗಳಿಂದ ನಿರಂತರ ಶಬರಿಮಲೆಗೆ ಹೋಗುತ್ತಾರೆ. ಇದರಲ್ಲಿ ಸತತ 24 ವರ್ಷ ಪಾದಯಾತ್ರೆಯ ಮೂಲಕವೇ ತೆರಳಿದ್ದಾರೆ. 25ನೇ ವರ್ಷದ ಯಾತ್ರೆ ಭಾನುವಾರ ಆರಂಭಿಸಿದ್ದಾರೆ. ತಂಡದಲ್ಲಿ ಸತೀಶ್ ಗುರುಸ್ವಾಮಿಯ ಸಹೋದರ ರಾಜೇಶ್, ಗುರುಪ್ರಸಾದ್ ಪಂಜ, ಪ್ರಜ್ವಲ್ ನೆಲ್ಯಾಡಿ, ಸುರೇಶ್ ದೇಲಂಪಾಡಿ, ವಾಸಪ್ಪ ಮಡಪ್ಪಾಡಿ, ಸಂಪ್ರೀತ್ ಮರ್ಕಂಜ, ಮೋಕ್ಷಿತ್ ಐವರ್ನಾಡು, ಶಿವಪ್ರಸಾದ್ ನಾರ್ಣಕಜೆ, ಚೇತನ್ ಸೇವಾಜೆ, ಶಿವಪ್ರಸಾದ್ ಎಲಿಮಲೆ, ಅಭಿನಾಶ್ ಕಲ್ಲುಗುಂಡಿ, ಶಶಿಧರ ಕಲ್ಲುಗುಂಡಿ, ಅನಂತ ಕಲ್ಲುಗುಂಡಿ, ಸುರೇಶ್ ಪರಿವಾರಕಾನ, ಮಣಿಕಂಠ ಎಲಿಮಲೆ, ದಿನೇಶ್ ಅರಂಬೂರು, ಸಂತೋಷ್ ಕಾಯರ್ತೋಡಿ ಪಾದಯಾತ್ರೆ ಕೈಗೊಂಡಿದ್ದಾರೆ.
ಇದರಲ್ಲಿ 17 ಬಾರಿ ಶಬರಿಮಲೆ ಯಾತ್ರೆ ಮಾಡಿರುವ ರಾಜೇಶ್ 7ನೇ ಬಾರಿ ಪಾದಯಾತ್ರೆ ಕೈಗೊಂಡಿದ್ದಾರೆ. ಸುರೇಶ್ ದೇಲಂಪಾಡಿ, ಶಿವಪ್ರಸಾದ್ ಎಲಿಮಲೆ, ಚೇತನ್ ಸೇವಾಜೆ ಎರಡನೇ ಬಾರಿ ಪಾದಯಾತ್ರೆ ಮಾಡುತ್ತಿದ್ದರೆ. ಉಳಿದವರು ಮೊದಲ ಬಾರಿಗೆ ಅಯ್ಯಪ್ಪನ ಸನ್ನಿಧಿಗೆ ಪಾದಯಾತ್ರೆ ಮಾಡುತ್ತಿದ್ದಾರೆ.
ಅಯ್ಯಪ್ಪನ ಕಾಣಲು ನಿರಂತರ 25ನೇ ವರ್ಷವೂ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ
The Sullia Mirror Channel
Watch and subscribe
ಸತೀಶ್ ಗುರುಸ್ವಾಮಿ ಪ್ರಥಮ ಬಾರಿ ಪಾದಯಾತ್ರೆ ಮಾಡಿದಾಗ ಕೇವಲ ನಾಲ್ಕು ಮಂದಿ ಮಾತ್ರ ಇದ್ದರು. ಬಳಿಕದ ವರ್ಷಗಳಲ್ಲಿ ಪಾದಯಾತ್ರೆ ಮಾಡುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಆರಂಭದ ವರ್ಷಗಳಲ್ಲಿ 13 ದಿನದಲ್ಲಿ ಶಬರಿಮಲೆ ತಲುಪುತ್ತಿದ್ದರು. ಈಗ ಹೆಚ್ಚು ವಿಶ್ರಾಂತಿ ಪಡೆದುಕೊಳ್ಳುವ ಕಾರಣ 17 ದಿನ ಬೇಕಾಗುತ್ತದೆ. ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಪ್ರತಿ ವರ್ಷ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ. ಆದರೆ ಇಷ್ಟು ದೂರ ನಿರಂತರ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುವುದು ಮಾತ್ರ ಬಲು ಅಪರೂಪ.
ಕೆಂಚಪ್ಪ ಗುರುಸ್ವಾಮಿಗಿದು 50ನೇ ವರ್ಷದ ಯಾತ್ರೆ:
ಸತೀಶ್ ಗುರುಸ್ವಾಮಿಯವರ ತಂದೆ ಜಟ್ಟಿಪಳ್ಳದ ಕೆಂಚಪ್ಪ ಗುರುಸ್ವಾಮಿ ಈ ವರ್ಷ 50ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದಾರೆ. 1972ರಿಂದ ನಿರಂತರ ಶಬರಿಮಲೆ ಯಾತ್ರೆ ನಡೆಸುತ್ತಾ ಬಂದಿರುವ ಇವರು ಹಿರಿಯ ಗುರುಸ್ವಾಮಿ. ಕೆಂಚಪ್ಪ ಗುರುಸ್ವಾಮಿ ತಮ್ಮ ಮಕ್ಕಳ ಜೊತೆ ಪಾದಯಾತ್ರೆ ನಡೆಸದಿದ್ದರೂ ಪಾದಯಾತ್ರೆಗೆ ಅವರು ಮಾರ್ಗದರ್ಶನ ನೀಡುತ್ತಾರೆ. ಜನವರಿ 9 ರಂದು ಕಟ್ಟುಕಟ್ಟಿ ಶಬರಿಮಲೆಗೆ ತೆರಳುವ ಕೆಂಚಪ್ಪ ಗುರುಸ್ವಾಮಿ ಮತ್ತು ತಂಡ ಪಾದಯಾತ್ರೆ ನಡೆಸಿದ ತಂಡದೊಂದಿಗೆ ಸನ್ನಿಧಾನದಲ್ಲಿ ಸೇರಿಕೊಳ್ಳುತ್ತಾರೆ.
‘ನಿರಂತರ ಪಾದಯಾತ್ರೆಯ ಮೂಲಕ ಶಬರಿಮಲೆ ಯಾತ್ರೆ ನಡೆಸುವುದರಿಂದ ಆತ್ಮತೃಪ್ತಿ ಮತ್ತು ವಿಶಿಷ್ಟ ಅನುಭವವನ್ನು ನೀಡುತ್ತದೆ. ಪಾದಯಾತ್ರೆಯ ಮೂಲಕ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳುವುದರಿಂದ ಶಬರಿಮಲೆ ಯಾತ್ರೆಯ ನಿಜವಾದ ಅನುಭವ ದೊರೆಯುತ್ತದೆ. ಶಬರಿಮಲೆ ಯಾತ್ರೆ ಕೈಗೊಳ್ಳುವವರು ಎಲ್ಲರೂ ಪಾದಯಾತ್ರೆಯ ಮೂಲಕ ತೆರಳಿದರೆ ಉತ್ತಮ’
-ಸತೀಶ್ ಗುರುಸ್ವಾಮಿ.