ಹೈದರಾಬಾದ್: ವಿರಾಟ್ ಕೊಹ್ಲಿಯ ಐಪಿಎಲ್ ಇತಿಹಾಸದ ಆರನೇ ಶತಕ (100 ರನ್, 63 ಎಸೆತ, 12 ಫೋರ್, 4 ಸಿಕ್ಸರ್) ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಆಕರ್ಷಕ ಅರ್ಧಶತಕದ (71 ರನ್, 47 ರನ್, 2 ಸಿಕ್ಸರ್) ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 8 ವಿಕೆಟ್ಗಳ ನಿರಾಯಾಸ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಆರ್ಸಿಬಿ ತಂಡ
ಪ್ಲೇಆಫ್ಗೆ ಇನ್ನಷ್ಟು ಸನಿಹಕ್ಕೆ ಬಂತು. ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟ ಮಾಡಿಕೊಂಡು 186 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್ ನಷ್ಟಕ್ಕೆ 187 ರನ್ ಬಾರಿಸಿ ವಿಜಯೋತ್ಸವ ಆಚರಿಸಿತು. ಈ ಸೋಲಿನೊಂದಿಗೆ ಎಸ್ಆರ್ಎಚ್ ತಂಡದ ವಿಕೆಟ್ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ (104 ರನ್, 51 ಎಸೆತ, 6 ಸಿಕ್ಸರ್, 8 ಫೋರ್) ಬಾರಿಸಿದ ವಿಸ್ಫೋಟಕ ಶತಕ ವ್ಯರ್ಥವಾಯಿತು. ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಆರ್ಸಿಬಿ ಅತ್ಯಂತ ನಿರಾಳವಾಗಿ ಆಡಿತು. ಆರಂಭಿಕರಾದ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್ಗೆ 172 ರನ್ ಸೇರಿಸಿ ಗೆಲುವಿಗೆ ಭದ್ರ ಬುನಾದಿ ಹಾಕಿದರು.ಗ್ಲೆನ್ಮ್ಯಾಕ್ಸ್ವೆಲ್ 5 ರನ್ ಹಾಗೂ ಮೈಕೆಲ್ ಬ್ರಾಸ್ವೆಲ್ ಗೆಲುವಿನ ಗುರಿ ಮುಟ್ಟಿಸಿದರು.ಇದಕ್ಕೂ ಮುನ್ನ ಟೂರ್ನಿಯಲ್ಲಿ ಎಸ್ಆರ್ಎಚ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೆನ್ರಿಚ್ ಕ್ಲಾಸೆನ್ ಆರ್ಸಿಬಿ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರಿಸ್ಗೆ ಬಂದ ಅವರು ಎಂದಿನ ಶೈಲಿಯಲ್ಲೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಕೇವಲ 25 ಎಸೆತಗಳಿಗೆ ತಮ್ಮ ಅರ್ಧ ಶತಕ ಪೂರೈಸಿದರು. 49 ಎಸೆತಗಳಲ್ಲಿ ಶತಕ ಪೂರೈಸಿದರು. ಆರ್ಸಿಬಿ ತಮ್ಮ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿದರೆ ಪ್ಲೇ ಆಫ್ಗೆ ಅವಕಾಶ ಪಡೆಯಬಹುದು