*ಚಂದ್ರಾವತಿ ಬಡ್ಡಡ್ಕ
2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇತರೆಲ್ಲ ಪಕ್ಷಗಳಿಗಿಂತ ಅತಿ ಹೆಚ್ಚು ಮತಗಳನ್ನು ಗಳಿಸುವ ಮೂಲಕ 135 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಶನಿವಾರ ಪ್ರಕಟವಾದ 16ನೇ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ, ರಾಷ್ಟ್ರದ ಅತ್ಯಂತ ಹಳೆಯ ರಾಜಕೀಯ ಪಕ್ಷವು 135 ಸ್ಥಾನಗಳನ್ನು ಗೆದ್ದು ಶೇ.42.88ರಷ್ಟು ಮತ ಹಂಚಿಕೆ ದಾಖಲಿಸಿದೆ. ಇದು ಕಳೆದ 34 ವರ್ಷಗಳಲ್ಲೇ ಗಳಿಸಿದ ಅತ್ಯಧಿಕ ಮತಗಳಿಕೆಯಾಗಿದೆ. ಕಳೆದ 2018ರ ಚುನಾವಣೆಯಲ್ಲಿ ಕೇವಲ 80 ಸ್ಥಾನಗಳಿಗಷ್ಟೆ ತೃಪ್ತವಾಗಬೇಕಿದ್ದ ಕಾಂಗ್ರೆಸ್ ಈ ಬಾರಿ ಹೆಚ್ಚುವರಿ 55 ಸ್ಥಾನ ಗಳಿಸಿ ಅಭೂತಪೂರ್ವ ಗೆಲುವನ್ನು ಸಾಧಿಸಿ ಬೀಗಿದೆ. ಫಲಿತಾಂಶ ಘೋಷಣೆಗೆ
ಮುಂಚಿತವಾಗಿಯೇ ಬಹುಮತ ತಮ್ಮದೇ ಎಂದು ಕಾಂಗ್ರೆಸ್ ಹೇಳಿಕೊಂಡಿದ್ದರೂ ಸರಳ ಬಹುಮತ ಲಭಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಸ್ವತಃ ಕಾಂಗ್ರೆಸ್‌ಗೆ ಇದು ಅಚ್ಚರಿಯ ಫಲಿತಾಂಶವಾಗಿದೆ.
ಈ ಬಾರಿಯೂ ಕಪ್ ನಮ್ಮದೇ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಪಕ್ಷವು ಕಳೆದಬಾರಿಗಿಂತ 38 ಸೀಟುಗಳನ್ನು ಕಳೆದುಕೊಂಡು ಕೇವಲ 66 ಸ್ಥಾನಗಳಿಗಷ್ಟೆ ತೃಪ್ತಿಪಟ್ಟು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ. ಇತ್ತ ತಾನೇ ಕಿಂಗ್ ಮೇಕರ್ ಎಂಬ ಹುರುಪಿನಲ್ಲಿದ್ದ ಜೆಡಿಎಸ್ ಕಳೆದ ಬಾರಿಗಿಂತ ಈ ಸರ್ತಿ 18 ಸೀಟುಗಳನ್ನು ಕಳೆದುಕೊಂಡು 19 ಸೀಟುಗಳನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದೆ. ಇತರೇ ನಾಲ್ಕು ಸ್ಥಾನಗಳಲ್ಲಿ ಕರ್ನಾಟಕ ಸರ್ವೋದಯ ಪಕ್ಷ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ತಲಾ ಒಬ್ಬೊಬ್ಬರು ಹಾಗೂ ಇಬ್ಬರು ಪಕ್ಷೇತರರ ಆಯ್ಕೆಯಾಗಿದ್ದಾರೆ.
ಎಂದಿನಂತೆ ಈ ಬಾರಿಯೂ ಆಡಳಿದ ವಿರೋಧಿ ಅಲೆ ಪ್ರಬಲವಾಗಿ ಬೀಸಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಐದು ಗ್ಯಾರಂಟಿ ಯೋಜನೆಗಳು ದೊಡ್ಡ ಪ್ರಭಾವ ಬೀರಿದೆ. ಜೊತೆಗೆ ವ್ಯವಸ್ಥಿತವಾದ ಪ್ರಚಾರ, ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿತೋರಿಸಿ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ಗಳ ಅತಿಯಾದ ಆತ್ಮವಿಶ್ವಾಸ ಅವುಗಳಿಗೆ ಮಾರಕವಾಗಿದೆ. ಗ್ಯಾರಂಟಿ ಕಾರ್ಡ್ ಎದುರು ಬಿಜೆಪಿಯ ಇತರ ಯಾವುದೇ ಕಾರ್ಡ್ ವರ್ಕೌಟ್ ಆಗಲಿಲ್ಲ!
ಮತ ಹಂಚಿಕೆಯನ್ನು ಗಮನಿಸಿದರೆ ಈ ಸರ್ತಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿದೆ. ಕಳೆದ ಬಾರಿ ಶೇ 72.50 ಇದ್ದರೆ ಈ ಸರ್ತಿ ಶೇ 73.19ಕ್ಕೆ ಏರಿಕೆಯಾಗಿತ್ತು. ಕಾಂಗ್ರೆಸ್ ತನ್ನ ಶೇಕಡಾವಾರು ಮತಗಳ ಪ್ರಮಾಣವನ್ನು 38.14 ರಿಂದ 42.88ಕ್ಕೆ ಹೆಚ್ಚಿಸಿಕೊಂಡಿದೆ. ಬಿಜೆಪಿಯ ಶೇಕಡಾವಾರು ಮತಗಳ ಪ್ರಮಾಣದಲ್ಲಿ ಅಂತ ವ್ಯತ್ಯಾಸವೇನೂ ಆಗಿಲ್ಲ. ಶೇ 36.35ರಿಂದ ಶೇ 35ಕ್ಕೆ ಅಲ್ಪ ಕುಸಿತ ಕಂಡಿದೆ. ಆದರೆ ಜೆಡಿಎಸ್ 18.3ರಿಂದ 13.29ಕ್ಕೆ ಇಳಿದು ಶೇ 5.01ರಷ್ಟು ಮತಗಳನ್ನು ಕಳೆದುಕೊಂಡಿದೆ. ಕಳೆದ ಚುನಾವಣೆಗೆ ಹೋಲಿಸಿದಾಗ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಟ್ಟಾರೆ ಮತಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಕಾಂಗ್ರೆಸ್‌ಗೆ 1,67,89,272 (ಕಳೆದ ಬಾರಿ 1,39,86,526) ಮತ್ತು ಬಿಜೆಪಿಗೆ 1,40,96,529 ಮತಗಳು (ಕಳೆದ ಬಾರಿ 1,33,28,524) ಸಿಕ್ಕಿವೆ. ಜೆಡಿಎಸ್ ಮತಗಳು 52,05,489 ಕ್ಕೆ (ಕಳೆದ ಬಾರಿ 67,26,667)ಇಳಿಕೆಯಾಗಿವೆ. ಒಟ್ಟಾರೆಯಾಗಿ ಜೆಡಿಎಸ್
ಕಳೆದುಕೊಂಡಿದ್ದನ್ನು ಕಾಂಗ್ರೆಸ್ ಗಳಿಸಿಕೊಂಡಿದೆ. ಒಟ್ಟಿನಲ್ಲಿ ಅತಂತ್ರ ಸ್ಥಿತಿ ಸೃಷ್ಟಿಯಾಗಿಲ್ಲ ಎಂಬುದು ಮತದಾರನಿಗೆ ಸಮಾಧಾನಕರ ಅಂಶ.
ಆದರೆ, ಕಾಂಗ್ರೆಸ್, ಸಲೀಸಾಗಿ ಗೆದ್ದು ಅಧಿಕಾರ ಹಿಡಿದಿದ್ದರೂ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಅಷ್ಟು ಸಲೀಸಾಗಿರಲಿಲ್ಲ. ಸತತ ನಾಲ್ಕುದಿನಗಳ ಎಡೆಬಿಡದ ಸಮಾಲೋಚನೆ ಚರ್ಚೆಯ ಬಳಿಕವಷ್ಟೆ ಕಾಂಗ್ರೆಸ್ ವರಿಷ್ಟರು ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಿದ್ದು. ಕಾಂಗ್ರೆಸ್‌ನ ಜೋಡೆತ್ತುಗಳೆಂದು ಕರೆಸಿಕೊಂಡಿರುವ ಮತ್ತು ಪಕ್ಷದ ಗೆಲುವಿಗೆ ಶತಾಯ-ಗತಾಯ ಪ್ರಯತ್ನಪಟ್ಟಿರುವ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಮುಖ್ಯಮಂತ್ರಿ ಪಟ್ಟ ತನಗೇ ಬೇಕೆಂದು ಪಟ್ಟು ಹಿಡಿದ ಕಾರಣ ಪ್ರಯಾಸಕರ ಆಯ್ಕೆ ನಡೆದಿದ್ದು ಕೊನೆಗೂ ಸಿದ್ಧರಾಮಯ್ಯರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದ್ದು, ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿಸಲಾಗಿದೆ. ಇಬ್ಬರೂ ಅರ್ಧರ್ಧ ಅವಧಿಗೆ ಮುಖ್ಯಮಂತ್ರಿಗಳಾಗಿ ಎಂಬ ರಾಜೀಸೂತ್ರವನ್ನು ಹೈಕಮಾಂಡ್ ಹೆಣೆದಿದ್ದು ಮೊದಲ ಅವಧಿಗೆ ಸಿದ್ಧರಾಮಯ್ಯ ಅಧಿಕಾರ ವಹಿಸಲಿದ್ದಾರೆ.
ಸಿದ್ಧರಾಮಯ್ಯನವರಿಗಿರುವ ಜನಪ್ರಿಯತೆ, ಬಡವರು, ದಲಿತರು, ಮುಸ್ಲಿಮರ ಒಲವು, ಮಾಸ್ ಲೀಡರ್‌ಶಿಪ್, ಡೋಂಟ್‌ಕೇರ್ ಗುಣಗಳು, ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಅಗತ್ಯವಿದೆ ಎಂಬ ಲೆಕ್ಕಾಚಾರ ಮತ್ತು ಡಿಕೆಶಿಯವರ ಸಂಘಟನಾ ಚತುರತೆ ಮತ್ತು ನಾಯಕತ್ವ ಮುಂದಿನ ಚುನಾವಣೆಯಲ್ಲಿಯೂ ಪಕ್ಷಕ್ಕೆ ಅಗತ್ಯ ಇದೆ ಎಂದು ಕಾಂಗ್ರೆಸ್ ಈ ತೀರ್ಮಾನಕ್ಕೆ ಬರಲಾಗಿದೆ. ನಾಳೆ ಶನಿವಾರ ಮಧ್ಯಾಹ್ನ 12.30ಕ್ಕೆ ಸಿದ್ಧರಾಮಯ್ಯ ಅವರು ಎರಡನೇ ಬಾರಿಗೆ ರಾಜ್ಯದ 31ನೆಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇತ್ತ ಬಿಜೆಪಿಯಲ್ಲಿಯೂ ತುರುಸಿನ ಚಟುವಟಿಕೆಗಳು ಮುಂದುವರಿದಿವೆ. ವಿಪಕ್ಷ ನಾಯಕ ಯಾರಾಗಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಸೋಲಿಗೆ ಕಾರಣ ಹುಡುಕಲಾಗುತ್ತಿದೆ. ಈಗ ಸೋತರೆ ಏನಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ಗೆಲ್ಲಿಸಬೇಕೆಂಬ ಹುಮ್ಮಸ್ಸಿನಲ್ಲಿದೆ. ಜೆಡಿಎಸ್ ನಾಯಕ 91ರ ಹರೆಯಕ್ಕೆ ಕಾಲಿಟ್ಟಿರುವ ದೇವೇಗೌಡರು ಚುನಾವಣಾ ಫಲಿತಾಂಶದಿಂದ ನಿರಾಶರಾಗದೆ
ಮುಂಬರುವ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಿ ಎಂದು ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಾಜಕೀಯವೆಂಬ ಹಾವು-ಏಣಿ ಆಟದಲ್ಲಿ ಸೋಲು-ಗೆಲುವು ಸಹಜ. ಇಲ್ಲಿ ಯಾವುದೂ ಶಾಶ್ವತವಲ್ಲ.
ನಮ್ಮ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಬಿಜೆಪಿಯ ಭಾಗೀರಥಿ ಮುರುಳ್ಯ ಅವರು ಶಾಸಕಿಯಾಗಿ ಆಯ್ಕೆಯಾಗಿ ಸುಳ್ಯಕ್ಷೇತ್ರದ ಪ್ರಥಮ ಮಹಿಳಾ ಶಾಸಕಿಯಾಗಿ ಚರಿತ್ರೆ ಬರೆದಿದ್ದಾರೆ. ಅವರ ಗೆಲುವಿನ ಅಂತರವು ಸ್ವತಃ ಅವರಿಗೆ ಅಚ್ಚರಿಯಾಗಿದೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಭಾಗೀರಥಿ ಮುರುಳ್ಯ ತಮ್ಮ ನಿಕಟ ಸ್ಫರ್ಧಿ ಕಾಂಗ್ರೆಸ್‌ನ ಜಿ.ಕೃಷ್ಣಪ್ಪರಿಗಿಂತ 30,875 ಮತಗಳ ಅಂತರದಿಂದ ಗೆದ್ದಿದ್ದಾರೆ . ಮುರುಳ್ಯ ಅವರು 93,911 ಮತಗಳನ್ನು ಹಾಗೂ ಜಿ.ಕೃಷ್ಣಪ್ಪ ಅವರು 63,036 ಮತಗಳನ್ನು ಪಡೆದಿದ್ದಾರೆ. ಸರಳ ನಡೆ-ನುಡಿಯ ಹೊಸ ಶಾಸಕಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು ಅವರು ಜನರ ಆಶೋತ್ತರಗಳನ್ನು ಈಡೇರಿಸುವತ್ತ ಕಾರ್ಯಪ್ರವೃತ್ತರಾಗಲಿ ಎಂಬ ಹಾರೈಕೆ.
ಚುನಾವಣಾ ಸ್ವಾರಸ್ಯಗಳು
ಈ ಬಾರಿಯ ಫಲಿತಾಂಶದಲ್ಲಿ ಹಲವು ವಿಶೇಷತೆಗಳಿವೆ. ದೇಶದಲ್ಲೇ ಹಿರಿಯ ಶಾಸಕ ಕರ್ನಾಟಕ ವಿಧಾನಸಭೆಯಲ್ಲಿದ್ದಾರೆ. 58 ಹೊಸ ಮುಖಗಳಿವೆ. 10 ಮಹಿಳಾ ಶಾಸಕಿಯರಿದ್ದಾರೆ. 8 ಮುಸ್ಲಿಂ ಶಾಸಕರು ಆಯ್ಕೆಯಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಶಾಮನೂರು ಶಿವಶಂಕರಪ್ಪ ಈ ಬಾರಿಯ ಅತಿ ಹಿರಿಯ ಶಾಸಕರಾಗಿದ್ದಾರೆ. 92 ವರ್ಷದ ಶಾಮನೂರು ಶಿವಶಂಕರಪ್ಪನವರು ಕೇವಲ ಕರ್ನಾಟಕ ಮಾತ್ರವಲ್ಲದೇ ಇಡೀ ಭಾರತದ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಅವರ ಜೊತೆ ಮಾನ್ವಿ ಶಾಸಕ ಜಿ ಹಂಪಯ್ಯ ನಾಯ್ಕ್ (84), ಅಫಜಲಪುರ ಶಾಸಕ ಎಂವೈ ಪಾಟೀಲ್ (82) ಅವರುಗಳೂ ಆಯ್ಕೆಯಾಗಿದ್ದಾರೆ. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ 28ರ ಹರೆಯದ ದರ್ಶನ್ ಧ್ರುವನಾರಾಯಣ್ ಅತಿ ಕಿರಿಯ ವಿಧಾನಸಭಾ ಸದಸ್ಯರಾಗಿದ್ದಾರೆ. ಮೂವರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರುಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇನ್ನೊರ್ವ
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೋಲನುಭವಿಸಿದ್ದಾರೆ. ನಮ್ಮ ಸುಳ್ಯದ ಭಾಗೀರಥಿ ಮುರುಳ್ಯ ಸೇರಿದಂತೆ ಒಟ್ಟು ಹತ್ತು ಮಂದಿ ಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ, ಕಲಬುರಗಿ ಉತ್ತರದಿಂದ ಕಾಂಗ್ರೆಸ್ ಪಕ್ಷದ ಖನೀಜ್ ಫಾತೀಮಾ, ಮೂಡಿಗೆರೆಯಲ್ಲಿ ಕಾಂಗ್ರೆಸ್‌ನಿಂದ ನಯನಾ ಮೋಟಮ್ಮ, ಬೆಳಗಾವಿ ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಲಕ್ಷ್ಮೀ ಹೆಬ್ಬಾಳ್ಕರ್, ಕೆಜಿಎಫ್‌ನಲ್ಲಿ ಕಾಂಗ್ರೆಸ್ ಸದಸ್ಯೆ ರೂಪಕಲಾ ಶಶಿಧರ್, ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ, ಮಹದೇವಪುರದಲ್ಲಿ ಮಂಜುಳಾ ಲಿಂಬಾವಳಿ, ದೇವದುರ್ಗದಲ್ಲಿ ಜೆಡಿಎಸ್‌ನಿಂದ ಕರೇಮ್ಮ ನಾಯಕ್, ಶಿವಮೊಗ್ಗ ಗ್ರಾಮಾಂತರದಲ್ಲಿ ಶಾರದಾ ಪೂರ್ಯನಾಯ್ಕ್, ಹರಪನಹಳ್ಳಿಯಲ್ಲಿ ಪಕ್ಷೇತರರಾಗಿ ಲತಾ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದಾರೆ. 58 ಮಂದಿ ಹೊಸಬರು ಆಯ್ಕೆಯಾಗಿದ್ದು ಮೊದಲ ಬಾರಿ ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ. ಇವರಲ್ಲಿ ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ. ಸುಧಾಕರ್ ಅವರನ್ನು ಮಣಿಸಿದ ಪ್ರದೀಪ್ ಈಶ್ವರ್ ಸೇರಿದಂತೆ ಕಾಂಗ್ರೆಸ್‌ನಿಂದ 35, ಬಿಜೆಪಿಯಿಂದ 19 ಮಂದಿ ಮತ್ತು 3 ಜೆಡಿಎಸ್ ಮತ್ತು ಒಬ್ಬರು ಪಕ್ಷೇತರರು. ಆಯ್ಕೆಯಾಗಿರುವ 8 ಮುಸ್ಲಿಂ ಶಾಸಕರು ಎಲ್ಲರೂ ಕಾಂಗ್ರೆಸ್‌ನವರೇ ಆಗಿದ್ದು, ಇವರಲ್ಲಿ ಒಬ್ಬರು ಮಹಿಳಾ ಶಾಸಕಿ.