*ಚಂದ್ರಾವತಿ ಬಡ್ಡಡ್ಕ.
ಕಳೆದ 6 ತಿಂಗಳಿನಿಂದ ಆರಂಭಗೊಂಡಿದ್ದ ಕಳೆದ ಒಂದೂವರೆ ತಿಂಗಳಿನಿಂದ ಶಿಖರದ ತುತ್ತ ತುದಿ ಏರಿದ್ದ ಹೈ ವೋಲ್ಟೇಜ್ಗೆ ರಾಜಕೀಯ ಕದನ ಕುತೂಹಲದ ಪ್ರಥಮ ಹಂತಕ್ಕೆ ನಾಳೆ ತೆರೆ ಬೀಳಲಿದೆ. ಚುನಾವಣೆಯ ಅಬ್ಬರಗಳೆಲ್ಲ ಮುಗಿದು ಮತದಾರ ಸಂವಿಧಾನ ಬದ್ಧವಾದ ತನ್ನ ಪರಮೋಚ್ಛ ಹಕ್ಕನ್ನು ಚಲಾಯಿಸಿದ್ದಾನೆ. ಯಾರ ಅದೃಷ್ಟ ಹೇಗಿದೆ ಎಂಬುದು ನಾಳೆ ನಿರ್ಧಾರವಾಗಲಿದೆ. ನಾಳೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟ ಆಗುತ್ತಿದ್ದಂತೆ ಮುಂದಿನ ಹಂತದ ಕುತೂಹಲದ
ಕದ ತೆರೆದುಕೊಳ್ಳಲಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಮತ ಚಲಾಯಿಸುವುದರೊಂದಿಗೆ ಮತದಾರನ ಪಾತ್ರ ಮುಗಿದಿದೆ. ಇನ್ನು ಐದು ವರ್ಷದ ಆಡಳಿತದ, ರಾಜಕೀಯ ರಂಗಿನಾಟದ ಪಾತ್ರದಾರಿಗಳಾಗುವವರು ಯಾರು ಎಂಬ ತೀರ್ಪನ್ನು ಮತದಾರ ಈಗಾಗಲೇ ನೀಡಿದ್ದು ಆ ತೀರ್ಪಿನ ರಹಸ್ಯ ನಾಳೆ ಹೊರ ಬರಲಿದೆ.ಫಲಿತಾಂಶದ ಆ ತೀರ್ಪಿಗೆ ಕಾಯುವ ಕಾತರ ಎಲ್ಲೆಡೆ ಮನೆ ಮಾಡಿದೆ. ಈ ಕುತೂಹಲ ರಾಜಕೀಯ ಆಸಕ್ತರಲ್ಲಿ ಮಾತ್ರವಲ್ಲದೆ ಜನ ಸಾಮಾನ್ಯರು ಸೇರಿ ದೇಶವೇ ರಾಜ್ಯದ ಮುಂದಿನ 5 ವರ್ಷಗಳ ಭವಿಷ್ಯ ನಿರ್ಧರಿಸುವ ಚುನಾವಣೆಯ ಫಲಿತಾಂಶಕ್ಕಾಗಿ ಕಾದಿದೆ. ಯಾವುದಾದರೂ ಒಂದೇ ಪಕ್ಷ ಬಹುಮತ ಪಡೆದು ಸರಕಾರ ರಚಿಸಲಿದೆಯಾ, ತ್ರಿಶಂಕು ಸ್ಥಿತಿ ನಿರ್ಮಾಣವಾಗಲಿದೆಯಾ..?
ಸಮ್ಮಿಶ್ರ ಸರಕಾರ ರಚನೆ ಆಗಬಹುದಾ. ಯಾರೆಲ್ಲಾ ಸೇರಿ ಸರಕಾರ ರಚಿಸಬಹುದು.. ಇತ್ಯಾದಿ..ಇತ್ಯಾದಿ ಏಳುವ ಹಲವು ಪ್ರಶ್ನೆಗಳಿಗೆ ನಾಳೆ ಮಧ್ಯಾಹ್ನದ ವೇಳೆಗೆ ಉತ್ತರ ಸಿಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗೆಲುವು ನಮ್ಮದೇ, ಸರಕಾರ ರಚಿಸುವವರು ನಾವೇ ಎಂದು ಬೀಗುತ್ತಿದ್ದರೆ, ಕಿಂಗ್ ಮೇಕರ್ ನಾವೇ ಎಂದು ಜೆಡಿಎಸ್ ಪಕ್ಷ ಹೇಳುತಿದೆ. ನಾವೂ ನಿರ್ಣಾಯಕ ಶಕ್ತಿಯಾಗಲಿದ್ದೇವೆ ಎಂದು ಇತರ ಪಕ್ಷಗಳೂ ಹೇಳುತಿವೆ. ವಿವಿಧ ಮಾಧ್ಯಗಳು ನಡೆಸಿದ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಭಿನ್ನ-ಭಿನ್ನವಾದ ರಂಗು ರಂಗಿನ ಫಲಿತಾಂಶಗಳನ್ನು ನೀಡಿ ಫಲಿತಾಂಶಕ್ಕೆ ಮುನ್ನವೇ ದೊಡ್ಡ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಸಮೀಕ್ಷೆಗಳು ನಿಜವಾಗುತ್ತದಾ ಅಥವಾ ತಲೆಕೆಳಗಾಗುತ್ತದಾ ಎಂಬುದನ್ನು ಆ ಇವಿಎಮ್ಮೇ ಹೇಳಬೇಕು. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುವ, ಬಹುಮತದ ಲಕ್ಷ್ಮಣ ರೇಖೆ ದಾಟಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರುವ ಅಥವಾ
ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇಲ್ಲದ ಸನ್ನಿವೇಶ.. ಜೆಡಿಎಸ್ ಕಿಂಗ್ ಮೇಕರ್ ಆಗಿ ಸಮ್ಮಿಶ್ರ ಸರಕಾರ ರಚನೆಯಾಗುವ ಹೀಗೆ ಒಂದೊಂದು ಕೋನದಲ್ಲಿ ನೋಡಿದರೆ ಒಂದೊಂದು ಸನ್ನಿವೇಷಗಳು ತೆರೆದು ಕೊಳ್ಳುತ್ತದೆ.
ಒಟ್ಟಾರೆಯಾಗಿ ನೋಡಿದರೆ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಯಂತ್ರದಲ್ಲಿ ಭದ್ರವಾಗಿರುವ ಮತದಾರನ ಮನಸ್ಸು ಎತ್ತ ವಾಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲು ಮತ್ರ ಯಂತ್ರಗಳು ಓಪನ್ ಆಗಬೇಕು.. ಅದಕ್ಕೆ ಇನ್ನೂ ಕೆಲವು ಗಂಟೆಳು ಕಾಯಲೇ ಬೇಕು.
ಇನ್ನು ಸುಳ್ಯ ವಿಧಾನಸಭಾ ಕ್ಷೇತ್ರದತ್ತ ಕಣ್ಣು ಹಾಯಿಸಿದರೆ ಭಿನ್ನ ಭಿನ್ನ ರಂಗು ರಂಗಿನ ಚಿತ್ರಣ ತೆರೆದು ಕೊಳ್ಳುತ್ತದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಸ್ವಲ್ಪ ಕಡಿಮೆ ಆಗಿದೆ. ಚುನಾವಣಾ ಕಣದಲ್ಲಿ ಕೂಡ ಪ್ರಮುಖ ಪಕ್ಷಗಳ ಕಾರ್ಯಕರ್ತರಲ್ಲಿ, ಮತದಾರರಲ್ಲಿ ಅಂತಹಾ ಜೋಶ್ ಎಲ್ಲಾ ಕಡೆ ಸ್ವಲ್ಪ ಕಡಿಮೆ ಇತ್ತು. ಮತದಾನದ ದಿನ ಅಂತಹಾ ಉತ್ಸಾಹ ಕಳೆದ ಅನೇಕ ಚುನಾವಣೆಗೆ ಹೋಲಿಸಿದರೆ ಸ್ಲಲ್ಪ ಕಡಿಮೆ ಇತ್ತು. ಅದು ಮತದಾನ ಪ್ರಮಾಣದಲ್ಲಿಯೂ ಪ್ರತಿಫಲಿಸಿದೆ. ಅದು ಪಲಿತಾಂಶದಲ್ಲಿ ಹೇಗೆ ಪ್ರತಿಫಲಿಸಲಿದೆ ಎಂಬ ಕುತೂಹಲ ಮಾತ್ರ ಉಳಿದಿದೆ.
ಇದು ಯಾರಿಗೆ ಲಾಭವಾಗಲಿದೆ? ಯಾರಿಗೆ ನಷ್ಟವಾಗಲಿದೆ? ಪ್ರಥಮವಾಗಿ ಮತ ಚಲಾಯಿಸಿದ ಯುವ ಮತದಾರರನ್ನು ಸೆಳೆದವರು ಯಾರು ಇದಕ್ಕೆಲ್ಲಾ ನಾಳೆ ಉತ್ತರ ಸಿಗಲಿದೆ. ಏನಿದ್ದರೂ ಸುಳ್ಯದಲ್ಲಿ ಇದ್ದದು ಬಿಜೆಪಿ ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಬಿಜೆಪಿಯ ಭದ್ರಕೋಟೆ ಎಂದೇ ಕರೆಸಿಕೊಂಡಿರುವ ಸುಳ್ಯಕ್ಕೆ ಈ ಸರ್ತಿ ಪ್ರಥಮ ಬಾರಿಗೆ ಒಬ್ಬ ಮಹಿಳಾ ಶಾಸಕಿಯ ನೀಡಲಿದ್ದೇವೆ ಎಂಬುದು ಬಿಜೆಪಿಗರ ಅಂಬೋಣ. ಬಿಜೆಪಿಯ ಕಳೆದ 30 ವರ್ಷಗಳ ನಿರಂತರ ಓಟಕ್ಕೆ ತಡೆ ಹಾಕಿ ಕಾಂಗ್ರೆಸ್ ಶಾಸಕರನ್ನು ವಿಧಾನಸಭೆಗೆ ಕಳಿಸಲಿದ್ದೇವೆ ಎಂಬುದು ಕಾಂಗ್ರಸ್ಸಿಗರ ಆತ್ಮ ವಿಶ್ವಾಸ. ಆದರೆ ಮತದಾರನ ಮನಸ್ಸೇನು ಎಂಬುದು ಕೊನೆಯ ತನಕವೂ ಚಿದಂಬರ ರಹಸ್ಯವೇ! ಯಾವುದಕ್ಕೂ ನಾಳೆಯ ತನಕ ಕಾದುನೋಡಬೇಕಿದೆ.