ಸುಳ್ಯ: ಯಜ್ ಯಾತ್ರಿಕರಿಗೆ ಯಾತ್ರೆ ಕೈಗೊಳ್ಳಲು ಇದ್ದ ಮಂಗಳೂರಿನ ಹಜ್ ಎಂಬಾರ್ಕೇಷನ್ ಕೇಂದ್ರವನ್ನು ರದ್ದು ಮಾಡಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಜ್ ಯಾತ್ರಿಕರಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ರಾಜ್ಯ ಮುಸ್ಲೀಂ ಯೂತ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು. ಮಂಗಳೂರು ವಿಮಾನ ನಿಲ್ದಾಣದಿಂದ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಇದ್ದಾಗ
ಜನರಿಗೆ ಹೆಚ್ಚು ಅನುಕೂಲ ಆಗಿತ್ತು. ಆದರೆ ಈಗ ಮಂಗಳೂರಿನಿಂದ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಇಲ್ಲಾ. ಮಂಗಳೂರಿನ ಬದಲು ಕಣ್ಣೂರಿಗೆ ಹೋಗಲು ಸೂಚಿಸಲಾಗಿದೆ. ಇದರಿಂದ ಜಿಲ್ಲೆಯಿಂದ ಹಜ್ ಯಾತ್ರೆ ಕೈಗೊಳ್ಳುವ 800ಕ್ಕೂ ಅಧಿಕ ಯಾತ್ರಿಕರಿಗೆ ಸಮಸ್ಯೆ ಆಗಿದೆ. ಪ್ರಯಾಣ ದೂರ ಆಗಿದೆ ಮತ್ತು ಖರ್ಚು ವೆಚ್ಚ ಜಾಸ್ತಿಯಾಗುತ್ತದೆ. ಎಸ್.ಎಂ.ಕೃಷ್ಣ ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ನಮ್ಮೆಲ್ಲರ ಪ್ರಯತ್ನದಿಂದ ಮಂಗಳೂರಿನಲ್ಲಿ ಎಂಬಾರ್ಕೇಷನ್ ಸೆಂಟರ್

ಆರಂಭಗೊಂಡು 2009ರಲ್ಲಿ ಪ್ರಥಮ ಹಜ್ ವಿಮಾನ ಆರಂಭವಾಗಿತ್ತು. ಬಳಿಕ ಪ್ರತಿ ವರ್ಷ ದ.ಕ.ಹಾಗೂ ಸಮೀಪದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ಹಾಸನ, ಕೊಡಗು ಜಿಲ್ಲೆ ಸೇರಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಹಜ್ ಯಾತ್ರಿಕರು ಇಲ್ಲಿಂದ ಯಾತ್ರೆ ಕೈಗೊಳ್ಳುತ್ತಿದ್ದರು. ಜಿಲ್ಲೆಯ ಹಜ್ ಯಾತ್ರಿಕರಿಗೆ ಆಗಿರುವ ಸಮಸ್ಯೆ ಪರಿಹರಿಸಲು ಮಂಗಳೂರಿನಿಂದ ಎಂಬಾರ್ಕೇಷನ್ ಅಗಬೆಕು ಎಂದು ಒತ್ತಾಯಿಸಿದ ಅವರು ಈ ವಿಚಾರವನ್ನು ಹಜ್ ಕಮಿಟಿ ಅಧ್ಯಕ್ಷ ಅಬ್ದುಲ್ಲ ಕುಟ್ಟಿ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು. ಮಸ್ಲೀಂ ಸಮುದಾಯದ ಬಹಳ ಪ್ರಮುಖವಾದ ಹಜ್ ಯಾತ್ರೆಗೆ ಆಗಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಹಾಗು ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಹಜ್ ಖಾತೆ ನಿರ್ವಹಿಸಲು ಮುಸ್ಲೀಂ ಸಮುದಾಯದ ಸಚಿವರನ್ನು ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ವಂದೇ ಭಾರತ್ ರೈಲು ಮಂಗಳೂರಿಗೆ ಯಾಕಿಲ್ಲ- ಶಹೀದ್ ಪ್ರಶ್ನೆ
ಕೇಂದ್ರ ಹಾಗೂ ರಾಜ್ಯ ಸರಕಾರ ಮಂಗಳೂರನ್ನು ಕಡೆಗಣಿಸುತ್ತಿದೆ. ಹಜ್ ಎಂಬಾರ್ಕೇಷನ್ ರದ್ದು ಮಾಡಿರುವುದರಿಂದ ಜನರಿಗೆ ತೊಂದರೆ ಆಗುವುದರ ಜೊತೆಗೆ ಜಿಲ್ಲೆಗೆ, ವಿಮಾನ ನಿಲ್ದಾಣಕ್ಕೆ ಮತ್ತು ಸಂಬಂಧಪಟ್ಟು ಅನೇಕ ಜನರಿಗೆ ಸಿಗುವ ಆದಾಯ ನಷ್ಟ ಆಗಿದೆ. ಅದರಂತೆ ತಿರುವನಂತಪುರದಿಂದ ಕಣ್ಣೂರಿಗೆ ಇದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಕಾಸರಗೋಡಿಗೆ ವಿಸ್ತರಿಸಲಾಗಿದೆ. ಅದನ್ನು ಜನರ ಅನುಕೂಲದ ದೃಷ್ಟಿಯಿಂದ ಮಂಗಳೂರಿನ ತನಕ ವಿಸ್ತರಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಈ ರೀತಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಡೆಗಣಿಸುತ್ತಿರುವುದರ ವಿರುದ್ಧ ಇಲ್ಲಿನ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಮೂಸಾ ಕುಂಞಿ ಪೈಂಬೆಚ್ಚಾಲ್, ಅಬೂಬಕ್ಕರ್ ಅಡ್ಕಾರ್, ಶರೀಫ್ ಕಂಠಿ, ಸಿದ್ದಿಕ್ ಕೊಕ್ಕೊ ಉಪಸ್ಥಿತರಿದ್ದರು.