ಬಾಕು: ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಗುರುವಾರ ಭಾರತದ ಯುವ ಗ್ರಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ವಿರುದ್ಧ ಜಯ ಸಾಧಿಸಿ ಚೆಸ್ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಮೊದಲ ಎರಡು ಕ್ಲಾಸಿಕಲ್ ಗೇಮ್ಗಳು ಡ್ರಾನಲ್ಲಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಫಲಿತಾಂಶ ನಿರ್ಧರಿಸಲು ಇಂದು ಟೈ-ಬ್ರೇಕರ್ ಪಂದ್ಯ
ನಡೆಸಲಾಯಿತು. ವಿಶ್ವಕಪ್ನಲ್ಲಿ ಪ್ರಜ್ಞಾನಂದ ಅತ್ಯುತ್ತಮ ಪ್ರದರ್ಶನದಿಂದ ಪ್ರಶಸ್ತಿಯ ಭರವಸೆ ಮೂಡಿಸಿದ್ದರು.
ಮೊದಲ ಟೈ-ಬ್ರೇಕರ್ನಲ್ಲಿ ಜಯ ಸಾಧಿಸಿದ ರ್ಯಾಪಿಡ್ ಹಾಗೂ ಬ್ಲಿಟ್ಸ್ ಮಾದರಿಯ ಹಾಲಿ ವಿಶ್ವ ಚಾಂಪಿಯನ್ ಕಾರ್ಲ್ಸನ್ 1-0 ಮುನ್ನಡೆ ಸಾಧಿಸಿದರು. ಪ್ರಜ್ಞಾನಂದ 47 ನಡೆಗಳಲ್ಲಿ ಮೊದಲ ಟೈ-ಬ್ರೇಕರ್ನಲ್ಲಿ ಸೋಲುಂಡರು. ಮೊದಲ ಟೈಬ್ರೇಕರ್ನಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು ಅಂತಿಮವಾಗಿ ಕಾರ್ಲ್ಸನ್ ಮೇಲುಗೈ ಸಾಧಿಸಿದರು.
ಎರಡನೇ ಟೈ-ಬ್ರೇಕರ್ನಲ್ಲಿ 18ರ ಹರೆಯದ ಪ್ರಜ್ಞಾನಂದ ವಿರುದ್ಧ ಡ್ರಾ ಮಾಡಿಕೊಂಡ ನಂತರ ಕಾರ್ಲ್ಸನ್ 1.5 ಅಂತರದಿಂದ ಪಂದ್ಯವನ್ನು ಜಯಿಸಿದರು.