ಕೋಲ್ಕತ್ತ: ಐಪಿಎಲ್ ಇತಿಹಾಸದಲ್ಲಿಯೇ ಅತೀ ದೊಡ್ಡ ಮೊತ್ತ ಬೆನ್ನಟ್ಟಿ ಗೆದ್ದ ಪಂಜಾಬ್ ಕಿಂಗ್ಸ್ ಹೊಸ ದಾಖಲೆ ಬರೆಯಿತು. ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಬೃಹತ್ ಮೊತ್ತ ಪೇರಿಸಿತು. ಗುರಿ ಬೆನ್ನಟ್ಟಿದ ಪಂಜಾಬ್18.4 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ
262 ರನ್ ಬಾರಿಸಿ 8 ವಿಕೆಟ್ ಗೆಲುವು ದಾಖಲಿಸಿತು. ಜಾನಿ ಬೆಯರ್ಸ್ಟೋ ಸಿಡಿಲಬ್ಬರದ ಶತಕ ಹಾಗೂ ಪ್ರಭುಮನ್ ಸಿಂಗ್ ಹಾಗೂ ಶಶಾಂಕ್ ಸಿಂಗ್ ಸ್ಪೋಟಕ ಅರ್ಧ ಶತಕದ ನೆರವಿನಿಂದ ಪಂಜಾಬ್ ದಾಖಲೆಯ ಜಯಭೇರಿ ಬಾರಿಸಿತು. ಜಾನಿ ಬೆಯರ್ಸ್ಟೋ ಕೇವಲ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 9 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ ಅಜೇಯ 108 ರನ್ ಬಾರಿಸಿದರೆ, ಪ್ರಭುಮನ್ ಸಿಂಗ್ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 54 ರನ್ ಬಾರಿಸಿದರು. ಶಶಾಂಕ್ ಸಿಂಗ್ 28 ಎಸೆತಗಳಲ್ಲಿ ಬೌಂಡರಿ ಹಾಗೂ 8 ಸಿಕ್ಸರ್ ಸಹೀತ ಅಜೇಯ 68 ರನ್ ಸಿಡಿಸಿದರು. ರೊಸ್ಸೋವ್ 16 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 26 ರನ್ ಚಚ್ಚಿದರು. ಸಿಕ್ಸರ್ಗಳ ಸುರಿಮಳೆಗೆರೆದ ಪಂಜಾಬ್ ಬ್ಯಾಟರ್ಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು. ಮೊದಲು ಬ್ಯಾಟ್ ಮಾಡಿದ
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಫಿಲಿಪ್ ಸಾಲ್ಟ್ 37 ಎಸೆತಗಳಲ್ಲಿ ತಲಾ 6 ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 75 ರನ್ ಬಾರಿಸಿದರೆ, ಮತ್ತೊಬ್ಬ ಆರಂಭಿಕ ಸುನಿಲ್ ನರೈನ್ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 71 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 138 ರನ್ಗಳು ಸೇರಿಸಿದರು.
ಮೂರನೇ ಕ್ರಮಾಂಕದಲ್ಲಿ ಬಂದ ವೆಂಕಟೇಶ್ ಆಯ್ಯರ್ 23 ಎಸೆತಗಳಲ್ಲಿ 39 ರನ್ಗಳಿಸಿದರು. ಆಂದ್ರೆ ರಸೆಲ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಕ್ರಮವಾಗಿ 24 ಹಾಗೂ 28 ಗಳಿಸಿದರು.
ಪಂಜಾಬ್ ಪರ ಅರ್ಶದೀಪ್ ಸಿಂಗ್ 2 ವಿಕೆಟ್ ಪಡೆದರೆ, ಸಾಮ್ ಕರನ್, ಹರ್ಷಲ್ ಪಟೇಲ್ ಹಾಗೂ ರಾಹುಲ್ ಚಹರ್ಗೆ ಒಂದು ವಿಕೆಟ್ ಲಭಿಸಿತು.