ಚೆನ್ನೈ: ಪಂಜಾಬ್ ಕಿಂಗ್ಸ್ ತಂಡವು ಬುಧ ವಾರ ನಡೆದ ಐಪಿಎಲ್ನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿತು.10 ಪಂದ್ಯಗಳನ್ನು ಆಡಿರುವ ಪಂಜಾಬ್ ತಂಡ ನಾಲ್ಕರಲ್ಲಿ ಗೆದ್ದು 8 ಅಂಕದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟರಿಂದ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಮೂಲಕ ಪ್ಲೇ ಆಫ್ ಕನಸನ್ನು
ಜೀವಂತವಾಗಿರಿಸಿದೆ. ಅಷ್ಟೇ ಪಂದ್ಯಗಳಲ್ಲಿ 10 ಪಾಯಿಂಟ್ಸ್ ಸಂಪಾದಿಸಿರುವ ಚೆನ್ನೈ ತಂಡವು ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.
ಋತುರಾಜ್ ಗಾಯಕವಾಡ ಅವರ ಅರ್ಧಶತಕದ ಬಲದಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ಗಳಲ್ಲಿ 7 ವಿಕೆಟ್ಗೆ 162 ರನ್ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಅದಕ್ಕೆ ಉತ್ತರವಾಗಿ ಇನ್ನೂ 13 ಎಸೆತಗಳು ಬಾಕಿ ಇರುವಂತೆ ಪಂಜಾಬ್ ತಂಡವು ಮೂರು ವಿಕೆಟ್ಗೆ 163 ರನ್ ಗಳಿಸಿ, ಸತತ ಎರಡನೇ ಜಯ ದಾಖಲಿಸಿತು. ಜಾನಿ ಬೆಸ್ಟೊ (46; 30ಎ, 4×7, 6×1) ಮತ್ತು ರಿಲೀ ರೂಸೊ (43; 23ಎ, 4×5, 6×2) ಎರಡನೇ ವಿಕೆಟ್ ಜೊತೆಯಾಟ
ದಲ್ಲಿ ಬಿರುಸಿನ 64 ರನ್ (37ಎ) ಸೇರಿಸಿ ತಂಡವನ್ನು ಜಯದತ್ತ ಕೊಂಡೊಯ್ದರು.
ಶಶಾಂಕ್ ಸಿಂಗ್ (ಔಟಾಗದೇ 25;26ಎ) ಮತ್ತು ಸ್ಯಾಮ್ ಕರನ್ (ಔಟಾಗದೇ 26; 20ಎ) ತಾಳ್ಮೆಯಿಂದ ತಂಡವನ್ನು ಗೆಲುವಿನ ದಡ ದಾಟಿಸಿದರು. ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡಕ್ಕೆ ಋತುರಾಜ್ ಗಾಯಕವಾಡ್ (62, 48ಎ, 4×5, 6×2) ಮತ್ತು ಅಜಿಂಕ್ಯ ರಹಾನೆ (29, 24 ಎ) ಮೊದಲ ವಿಕೆಟ್ಗೆ 61 ರನ್ ಸೇರಿಸಿದರು.