ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನು ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್ಎ) ಮಂಗಳವಾರ ಹೈಜಾಕ್ ಮಾಡಿದೆ ಎಂದು ವರದಿಯಾಗಿದೆ.ರೈಲಿನಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಕ್ವೆಟ್ಟಾದಿಂದ ಜಾಫರ್ ಎಕ್ಸ್ಪ್ರೆಸ್ ರೈಲು ಪೇಶಾವರ್ಗೆ ತೆರಳುತ್ತಿತ್ತು. ಈ ವೇಳೆ ಬಿಎಲ್ಎ ಉಗ್ರರು ರೈಲನ್ನು ತಡೆದು
9 ಬೋಗಿಗಳಲ್ಲಿ ಇದ್ದ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ವರದಿಯಾಗಿದೆ. ಹೈಜಾಕ್ ವೇಳೆ ಉಗ್ರರು ಹಾಗೂ ಪಾಕಿಸ್ತಾನದ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು 6 ಜನ ರಕ್ಷಣಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ಬಗ್ಗೆ ಬಿಎಲ್ಎ ಉಗ್ರ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದ್ದು, ರೈಲು ಹೈಜಾಕ್ ಮಾಡಿರುವುದನ್ನು ಒಪ್ಪಿಕೊಂಡಿದೆ.
ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಕ್ ಸರ್ಕಾರ ತಿಳಿಸಿದೆ.
ಬಲೂಚ್ ಲಿಬರೇಷನ್ ಆರ್ಮಿಯು (ಬಿಎಲ್ಎ) ಪಾಕಿಸ್ತಾನದಿಂದ ಬಲೂಚಿಸ್ತಾನ ಪ್ರಾಂತ್ಯವನ್ನು ಪ್ರತ್ಯೇಕ ದೇಶವನ್ನಾಗಿ ಮಾಡಲು ಹೋರಾಟ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ರೈಲನ್ನು ಹೈಜಾಕ್ ಮಾಡಿದೆ.