ಹೈದರಾಬಾದ್: ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್ಗಾಗಿ ನಾಯಕ ಬಾಬರ್ ಅಝಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಬುಧವಾರ ರಾತ್ರಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲಿ ಪಾಕ್ ಆಟಗಾರರಿಗೆ ಭವ್ಯ ಸ್ವಾಗತ ನೀಡಲಾಯಿತು. ಭಾರತದ ಸ್ವಾಗತಕ್ಕೆ ಪಾಕ್ ಆಟಗಾರರೇ ಮೂಕ ವಿಸ್ಮಿತರಾಗಿದ್ದಾರೆ. ಪಾಕ್ ಕ್ರಿಕೆಟಿಗರು
ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಸ್ವಾಗತವನ್ನು ಕೊಂಡಾಡಿದ್ದಾರೆ. ಮುಂದಿನ 15 ದಿನಗಳ ಕಾಲ ತಂಡ ಹೈದರಾಬಾದ್ನಲ್ಲಿ ಇರಲಿದೆ. ಈ ಬಾರಿಯ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಪಾಕಿಸ್ತಾನ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಏಳು ವರ್ಷಗಳ ಬಳಿಕ ಪಾಕಿಸ್ತಾನ ತಂಡ ಕ್ರಿಕೆಟ್ ಪಂದ್ಯ ಆಡಲು ಭಾರತಕ್ಕೆ ಬಂದಿದ್ದು, ಇದಕ್ಕೂ ಮುನ್ನ 2016ರ ಟಿ20 ವಿಶ್ವಕಪ್ಗಾಗಿ ಭಾರತಕ್ಕೆ ಬಂದಿತ್ತು. ಪಾಕಿಸ್ತಾನ ತಂಡ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಹಲವರು ಕ್ರಿಕೆಟಿಗರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಇದಲ್ಲದೆ, ಎಲ್ಲಾ ಆಟಗಾರರನ್ನು ತಂಡದ ಹೋಟೆಲ್ನಲ್ಲಿ ಶಾಲು ಹೊದಿಸಿ ಭಾರತೀಯ ಶೈಲಿಯಲ್ಲಿ ಸ್ವಾಗತಿಸಲಾಯಿತು. ಎಲ್ಲಾ ತಂಡಗಳು ಈಗಾಗಲೇ ಭಾರತವನ್ನು ತಲುಪಿವೆ. ಪ್ರತಿ ತಂಡವು ವಿಶ್ವಕಪ್ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ಇದರ ಭಾಗವಾಗಿ ಪಾಕಿಸ್ತಾನ ಕೂಡ ಸೆಪ್ಟೆಂಬರ್ 29 ರಂದು ನ್ಯೂಜಿಲೆಂಡ್ ಮತ್ತು ಅಕ್ಟೋಬರ್ 3 ರಂದು ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.