ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಝಿಲ್ಯಾಂಡ್ 8 ವಿಕೆಟ್ಜಯ ಗಳಿಸಿದೆ. ಈ ವಿಶ್ವಕಪ್ನಲ್ಲಿ ಸತತ 3ನೇ ಗೆಲುವಿನೊಂದಿಗೆ ನ್ಯೂಝಿಲ್ಯಾಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್ಗಳಲ್ಲಿ
9 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು. ನ್ಯೂಝಿಲೆಂಡ್ 42.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ಕೇನ್ ವಿಲಿಯಮ್ಸನ್ 8 ಬೌಂಡರಿ 1 ಸಿಕ್ಸರ್ ಸಹಿತ 78 ರನ್ ಗಳಿಸಿ ಆಕರ್ಷಕ ಅರ್ದಶತಕ ಬಾರಿಸಿದರು.ಡೆವೊನ್ ಕಾನ್ವೆ 45 ರನ್ ಗಳಿಸಿದರು. ಡರಲ್ ಮಿಚೆಲ್ 6 ಬೌಂಡರಿ 4 ಸಿಕ್ಸರ್ ಸಹಿತ ಸ್ಪೋಟಕ 89 ರನ್ ಸಿಡಿಸಿ ಅಜೇಯರಾಗಿ ತಂಡದ ಗೆಲುವಿಗೆ ಕಾರಣರಾದರು.
ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಬಾಂಗ್ಲಾಗೆ ಬ್ಯಾಟಿಂಗ್ ಆಹ್ವಾನ ನೀಡಿತು. ನಿಗದಿತ 50 ಒವರ್ಗಳಲ್ಲಿ ಬಾಂಗ್ಲಾ 9 ವಿಕೆಟ್ ಕಳೆದುಕೊಂಡು 245 ರನ್ ಬಾರಿಸಿತು. ಮೆಹಿದಿ ಹಸನ್ 30 ರನ್, ನಾಯಕ ಶಾಕಿಬ್ ಉಲ್ ಹಸನ್ 3 ಬೌಂಡರಿ 2 ಸಿಕ್ಸರ್ ಸಹಿತ 40 ರನ್ ಬಾರಿಸಿದರು. ಮುಷ್ಫಿಕುರ್ ರಹೀಮ್ 6 ಬೌಂಡರಿ 2 ಸಿಕ್ಸರ್ ಸಹಿತ 66 ರನ್ ಗಳಿಸಿದರು. ನ್ಯೂಝಿಲ್ಯಾಂಡ್ ಪರ ಲೋಕಿ ಫರ್ಗ್ಯುಸನ್ 3 ವಿಕೆಟ್ ಕಬಳಿಸಿದರೆ ಮಾಟ್ ಹೆನ್ರಿ ಹಾಗೂ ಟ್ರೆಂಟ್ ಬೋಲ್ಟ್ 2 ವಿಕೆಟ್ ಕಿತ್ತರು.









