ಬೆಂಗಳೂರು: ಪಕ್ಷದ ಹೈಕಮಾಂಡೇ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿ ಎಂದು ಭಾನುವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಯ ವಿಚಾರವೀಗ ದೆಹಲಿ ಅಂಗಳ ತಲುಪಿದೆ. ಬೆಂಗಳೂರಿನ ವಸಂತನಗರದಲ್ಲಿರುವ ಶಾಂಗ್ರಿಲಾ
ಹೋಟೆಲ್ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತವಾರಿ ರಣದೀಪ್ ಸುರ್ಜೇವಾಲಾ, ವೀಕ್ಷಕರು ಸೇರಿ ಹಲವು ಮುಖಂಡರು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಮುಖ್ಯಮಂತ್ರಿ ಆಯ್ಕೆಯ ಅಂತಿಮ ನಿರ್ಧಾರವನ್ನು ಸುರ್ಜೇವಾಲಾ ಅವರು ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದಾರೆ. ಇನ್ನು, ಸೋಮವಾರ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂಬುದಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹಾಗೆಯೇ, 50:50 ಫಾರ್ಮುಲಾ ಘೋಷಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾದ ಶಾಸಕರು ಇದಾದ ಬಳಿಕ ವೀಕ್ಷಕರೊಂದಿಗೆ ಕೂಡ ಸುರ್ಜೇವಾಲಾ ಮಾತುಕತೆ ನಡೆಸಿದರು. ಕೊನೆಗೆ, ಕಾಂಗ್ರೆಸ್ನ ಎಲ್ಲ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ, ಸಿಎಂ ಆಯ್ಕೆ ನಿರ್ಧಾರವನ್ನು ಹೈಕಮಾಂಡ್ಗೆ ಬಿಡೋಣ ಎಂಬ ತೀರ್ಮಾನ ತೆಗೆದುಕೊಳ್ಳಲಾಯಿತು. ಸೋಮವಾರ ನೂತನ ಮುಖ್ಯಮಂತ್ರಿಯ ಆಯ್ಕೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ರಾಜ್ಯ ಮುಖ್ಯಮಂತ್ರಿಯ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷರೇ ಮಾಡಲಿ ಎಂದು ಸಭೆಯಲ್ಲಿ ಒಂದೇ ಸಾಲಿನ ನಿರ್ಣಯ ತೆಗೆದುಕೊಳ್ಳಲಾಯಿತು.