*ಗಂಗಾಧರ ಕಲ್ಲಪಳ್ಳಿ.
ಸುಳ್ಯ: ನವರಾತ್ರಿ ಎಂದೊಡನೆ ಮನಸಿಗೆ ಓಡೋಡಿ ಬರುವುದು ಶುದ್ಧ ಶಾಸ್ತ್ರೀಯ ಸಂಗೀತದ ಇಂಪು, ಚೆಂಡೆ, ವಾದ್ಯಗಳ ಅಬ್ಬರ, ನವರಾತ್ರಿ ವೇಷಗಳ ವರ್ಣ ವೈವಿಧ್ಯ. ನವರಾತ್ರಿ ಸಂಗೀತೋತ್ಸವಗಳ ಮೂಲಕ ಶಾಸ್ತ್ರೀಯ ಸಂಗೀತದ ಇಂಪು ಮನಸನ್ನು ಪುಳಕಿತಗೊಳಿಸಿದರೆ, ಚೆಂಡೆ ವಾದ್ಯಗಳ ಅಬ್ಬರದೊಂದಿಗೆ ಆರ್ಭಟಿಸುವ ರಾಕ್ಷಸ ವೇಷಗಳು, ವೈವಿಧ್ಯ
ಕುಣಿತಗಳೊಂದಿಗೆ ತಂಡೋಪ ತಂಡವಾಗಿ ತಿರುಗಾಟ ನಡೆಸುವ ಹುಲಿ, ಸಿಂಹ, ಕರಡಿಯ ನವರಾತ್ರಿ ವೇಷಗಳು ದಸರಾ ಆಚರಣೆಯ ಮೆರುಗನ್ನು ಹೆಚ್ಚಸುತ್ತದೆ. ನವರಾತ್ರಿ ಆರಂಭದಿಂದಲೂ ನಗರ, ಗ್ರಾಮದ ಬೀದಿಗಳಲ್ಲಿ
ವೈವಿಧ್ಯಮಯ ಹುಲಿ, ಸಿಂಹ, ಕರಡಿ ವೇಷಗಳ ಕುಣಿತಗಳು ಜನಾಕರ್ಷಣೆಯನ್ನು ಪಡೆಯುತ್ತವೆ. ಜೊತೆಗೆ ಬೇಟೆಗಾರನ ವೇಷ, ಹಾಸ್ಯಗಾರನ ವೇಷಗಳು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.
ಒಂದೆರಡು ರಾಕ್ಷಸ, ಹುಲಿ, ಕರಡಿ, ಸಿಂಹ ವೇಷಗಳು, ಚೆಂಡೆ ವಾದನಕಾರರು ಸೇರಿದ ಚಿಕ್ಕ ಚಿಕ್ಕ ತಂಡಗಳು ಒಂದೆಡೆಯಾದರೆ,10-15 ಹುಲಿ, ಸಿಂಹ, ಕರಡಿ ವೇಷಗಳನ್ನೊಳಗೊಂಡ ದೊಡ್ಡ ತಂಡಗಳೂ ಕಂಡು ಬರುತ್ತಾರೆ. ಪಾರಂಪರಿಕ ನವರಾತ್ರಿ ವೇಷಗಳು ತುಳುನಾಡಿನ ದಸರಾ ಆಚರಣೆಯ ಅವಿಭಾಜ್ಯ ಅಂಗ.ಗ್ರಾಮ, ನಗರ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಹುಲಿ, ಕರಡಿ, ಸಿಂಹಗಳ ವೈವಿಧ್ಯ ವೇಷಗಳ ಮೈ ನವಿರೇಳಿಸುವ ಕುಣಿತಗಳು, ರಾಕ್ಷಸ ವೇಷದ ಅಬ್ಬರ ದಸರಾ ಆಚರಣೆಯ ವೈಭವವನ್ನು ಹೆಚ್ಚಿಸುತ್ತದೆ. ಒಂಭತ್ತು ದಿನಗಳ ಕಾಲ ವೇಷ ಧರಿಸಿ ನಾಡಿನಾದ್ಯಂತ ಸಂಚರಿಸಿ ಹಬ್ಬವನ್ನು ಸಂಪನ್ನಗೊಳಿಸುವ ನವರಾತ್ರಿ ವೇಷಗಳು ವಿಜಯದಶಮಿ ದಿನದಂದು ತಿರುಗಾಟವನ್ನು
ಕೊನೆಗೊಳಿಸುತ್ತಾರೆ. ಶಾರದೋತ್ಸವ, ದಸರಾ ಮೆರವಣಿಗೆಗಳಲ್ಲಿಯೂ ಭಾಗವಹಿಸಿದ ಬಳಿಕ ವೇಷವನ್ನು ತೆಗೆಯುವರು. ಬಳಿಕ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ.ಹರಕೆ ಹೇಳಿ ನವರಾತ್ರಿ ವೇಷ ಹಾಕುವವರೂ ಇದ್ದಾರೆ. ಹಲವಾರು ವರ್ಷಗಳಿಂದ ನಿರಂತರ ವೇಷ ಹಾಕುವವರೂ ಕಾಣ ಸಿಗುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ಪಾರಂಪರಿಕ ನವರಾತ್ರಿ ವೇಷಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ವೇಷ ಭೂಷಣಗಳಲ್ಲಿಯೂ ಬದಲಾವಣೆ ಕಾಣುತ್ತಿದೆ ಎನ್ನುತ್ತಾರೆ ಹಿರಿಯರು.
ಕರಾವಳಿ ಜಿಲ್ಲೆಗಳ ಸೊಗಸು:
ತುಳು ನಾಡಿನೆಲ್ಲೆಡೆ ಮಾರ್ನೆಮಿ ವೇಷ ಎಂದು ಕರೆಯಲ್ಪಡುವ ನವರಾತ್ರಿ ವೇಷಗಳ ಸೊಗಸು ಕಂಡು ಬರುತ್ತದೆ. ಬೀದಿಬೀದಿಯಲ್ಲೂ ಹುಲಿ ಕುಣಿತ, ಕರಡಿ ಕುಣಿತ, ಯಕ್ಷಗಾನ ವೇಷಗಳು ಲಯಬದ್ಧವಾಗಿ ಸಾಗುತ್ತ ಎಲ್ಲೆಡೆ ರಂಗು ತುಂಬುವ ಕಾಲವಿದು.ದಸರಾ ಸಮಯದಲ್ಲಿ ಮೈಸೂರಿನಲ್ಲಿ ಜಂಬೂ ಸವಾರಿಯೇ ವಿಶೇಷವಾದರೆ ದಕ್ಷಿಣ ಕನ್ನಡದಲ್ಲಿ ನವರಾತ್ರಿಯ ದಿನಗಳಲ್ಲಿ ಮಾರ್ನೆಮಿ ವೇಷಗಳೇ ವಿಶೇಷ. ನವರಾತ್ರಿ ಪರ್ವ ದಿನಗಳು ಆಗಮಿಸುತ್ತಿದ್ದಂತೆ ಇಲ್ಲಿನ ಊರು ಊರುಗಳಲ್ಲೂ ಸದ್ದು ಗದ್ದಲ ಏಳುತ್ತದೆ. ಚೆಂಡೆ, ಡೊಳ್ಳು ಬ್ಯಾಂಡ್ ಶಬ್ದಗಳ ಮೈ ನವಿರೇಳಿಸುವ ಅಬ್ಬರ ಆರಂಭಗೊಳ್ಳುತ್ತದೆ. ಹುಲಿವೇಷದ ತಂಡ, ಕರಡಿ, ಅದನ್ನು ಕುಣಿಸುವ ಮತ್ತಿಬ್ಬರು, ಯಕ್ಷಗಾನದ ವೇಷಗಳು, ದೇವ-ದೇವತೆಯರ ವೇಷ… ಹೀಗೆ ಬಗೆಬಗೆಯ ವೇಷಗಳು, ಹಲವು ಧ್ವನಿಗಳು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಂಭ್ರಮದ ಅಲೆ ಎಬ್ಬಿಸುತ್ತದೆ.
ಅದರಲ್ಲೂ ಹುಲಿ ಕುಣಿತ ಅತೀ ಸೊಗಸು. ಚೆಂಡೆ, ವಾದ್ಯಗಳ ತಾಳಕ್ಕೆ ಲಯ ಬದ್ಧವಾಗಿ ಕುಣಿಯುವ ಹುಲಿಗಳು, ಹುಲಿ ಕುಣಿತದಂತೆಯೇ ಕರಡಿ ವೇಷವೂ, ಸಿಂಹ ವೇಷವೂ ಬರುತ್ತದೆ. ಇದರಲ್ಲಿಯೂ ಬೇಟೆಯಾಡುವವನು, ವಾದ್ಯದವರ ತಂಡ ಇರುತ್ತದೆ. ಇದಲ್ಲದೆ ವಿವಿಧ ಬಗೆಯ ವೇಷಗಳು ಬೀದಿಯಲ್ಲೆಲ್ಲ ಸಾಗುತ್ತವೆ. ನಗರದೆಲ್ಲೆಡೆ ಸಂಚರಿಸುವ ಹುಲಿವೇಷ, ಕರಡಿ ಮೊದಲಾದ ವೇಷಗಳು ಮನೆ ಮನೆಗೂ ತೆರಳಿ ಹಬ್ಬದ ಸಂಭ್ರಮವನ್ನು ಸಾರುತ್ತವೆ. ಗ್ರಾಮಗಳಲ್ಲಿ ಮನೆಮನೆಗೂ ತೆರಳಿ ಅಬ್ಬರ ಮೊಳಗಿಸುತ್ತಾರೆ. ಪ್ರತಿಯೊಂದು ವೇಷಧಾರಿ ಹಾಗು ಕುಣಿತದ ಹಿಂದೆ ದೈವೀ ಸಮರ್ಪಣೆಯ ನಂಬಿಕೆ, ಭಕ್ತಿ ಭಾವದ ಆರಾಧನೆ ಇದೆ. ಜೊತೆಗೆ, ಸಂಪ್ರದಾಯ, ಆಚರಣೆ, ಸಂಭ್ರಮಗಳೂ ಮೇಳೈಸಿದೆ..