ಸುಳ್ಯ:ಇಂದು ನಾಗರ ಪಂಚಮಿ ಸಂಭ್ರಮ. ಸುಳ್ಯ ತಾಲೂಕಿನ ವಿವಿಧ ಭಾಗಗಳು ಸೇರಿದಂತೆ ಕರಾವಳಿಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಯಿತು.
ಇಂದು ನಾಗದೇವರನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ. ದೇವಸ್ಥಾನಗಳಲ್ಲಿ, ನಾಗಪ್ರತಿಷ್ಠಾ ಮಂಟಪಗಳಲ್ಲಿ, ನಾಗನ ಕಟ್ಟೆ, ಮೂಲ ನಾಗಸ್ಥಾನ, ನಾಗಬನ ಮತ್ತಿತರ ಕಡೆಗಳಲ್ಲಿ ನಾಗರ ಪಂಚಮಿ ಪ್ರಯುಕ್ತ
ನಾಗದೇವರಿಗೆ ಹಾಲು, ಸಿಹಿಯಾಳ, ಹರಿಸಿನ, ಕುಂಕುಮ ಮತ್ತಿತರ ಅಭಿಷೇಕ ಮಾಡಲಾಯಿತು. ನಾಗರಾಜನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಗಾರಾಧನೆಯ ಪುಣ್ಯತಾಣ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನಾಗಪ್ರತಿಷ್ಠಾ ಮಂಟಪದ ನಾಗ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಕುಕ್ಕೆ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಗ್ಗಿನಿಂದಲೇ ಭಾರೀ ರಶ್ ಕಂಡು ಬಂದಿತು.
ವಿವಿಧ ದೇವಸ್ಥಾನಗಳಲ್ಲಿ, ನಾಗ ಪ್ರತಿಷ್ಠಾ ಮಂಟಪಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ನಾಗದೇವನಿಗೆ ಹಾಲು, ಸಿಹಿಯಾಳ, ಹರಿಸಿಣ ಸಮರ್ಪಣೆ ಮಾಡಿದರು. ನಗರ, ಗ್ರಾಮೀಣ ಭಾಗಗಳಲ್ಲಿ ಎಲ್ಲೆಡೆ ನಾಗರ ಪಂಚಮಿ ಆಚರಿಸಲಾಯಿತು. ನಾಗಾರಾಧನೆಗೆ ತುಳುನಾಡಿನಲ್ಲಿ ವಿಶೇಷ ಮಹತ್ವ ಇದೆ. ಶ್ರಾವಣ ಮಾಸದಲ್ಲಿ ವರುವ ಮೊದಲ ಹಬ್ಬ ನಾಗರ ಪಂಚಮಿ.