ಸುಳ್ಯ:ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣದ ಧೈಯದೊಂದಿಗೆ, ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಆ.30ರಂದು ಜಾರಿಯಾಗಲಿದೆ. ಸುಳ್ಯ ನಗರ ಸೇರಿದಂತೆ ಸುಳ್ಯ ತಾಲೂಕಿನಲ್ಲಿಯೂ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ನಡೆಯಲಿದೆ ಎಂದು ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ನನಗರದ ಕಾರ್ಯಕ್ರಮ ಲಯನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಯೋಜನೆಯಲ್ಲಿ
ರಾಜ್ಯದಲ್ಲಿ ಸುಮಾರು 1.10 ಕೋಟಿ ಜನರು ನೋಂದಾಯಿಸಿದ್ದಾರೆ.
ಸುಳ್ಯ ನಗರದಲ್ಲಿ ಒಟ್ಟು 3717 ಪಡಿತರಚೀಟಿಯಲ್ಲಿ 2699 ಮಂದಿ ನೋಂದಾಯಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಟ್ಟು 23,918 ಪಡಿತರ ಚೀಟಿದಾರರಲ್ಲಿ 18,890 ಮಂದಿ ನೋಂದಾಯಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಒಟ್ಟು 21,589 ಮಂದಿ ನೋಂದಾಯಿಸಿದ್ದಾರೆ.
6,046 ಮಂದಿ ಬಾಕಿ ಇದ್ದಾರೆ ಎಂದು ಹೇಳಿದರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಫಲಾನುಭವಿಗಳು ಏಕ ಕಾಲದಲ್ಲಿ ಭಾಗವಹಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲಾ ಪಲಾನುಭವಿಗಳಿಗೆ ಅವರವರ ಖಾತೆಗೆ ನಗದು ವರ್ಗಾವಣೆ ಆಗಿರುವ ಬಗ್ಗೆ ಏಕ ಕಾಲದಲ್ಲಿ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಮೈಸೂರಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತದೆ. ಪ್ರತೀ ಕಾರ್ಯಕ್ರಮದ ಸ್ಥಳದಲ್ಲಿ ಒಂದು ಟಿ.ವಿ ಹಾಗೂ ಒಂದು ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಬೇಕು. ಟಿ.ವಿ ಪರದೆಯಲ್ಲಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದ ನೇರಪ್ರಸಾರವನ್ನು ಪ್ರದರ್ಶಿಸಬೇಕು ಹಾಗೂ ಎಲ್ ಇ ಡಿ ಪರದೆಯಲ್ಲಿ ಮೈಸೂರು ಕಾರ್ಯಕ್ರಮದ ಸ್ಥಳದಿಂದ ಸ್ಥಳೀಯ ಕಾರ್ಯಕ್ರಮದ ಸ್ಥಳದೊಂದಿಗೆ ಪರಸ್ಪರ ಸಂವಾದ ನಡೆಸಲು ವ್ಯವಸ್ಥೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದರು.
ಕಸ್ತೂರಿ ರಂಗನ್ ವರದಿಯ ಜಾರಿಮಾಡಲಾಗುತ್ತೆದೆ ಎಂದು ಬಿಜೆಪಿಯವರು ಗುಲ್ಲೆಬ್ಬಿಸುತ್ತಿದ್ದಾರೆ. ಇದನ್ನು
ನಿಲ್ಲಿಸುವುದು ಅಥವಾ ಜಾರಿಗೊಳಿಸಲು ಬಿಜೆಪಿಗೆ ಸಾಧ್ಯವಿದೆ. ಇದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರಗಳು ಏನೂ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈಗಲೂ ಈ ವರದಿಯನ್ನು ಜಾರಿ ಮಾಡಲು ಒಪ್ಪುವುದೂ ಇಲ್ಲ. ಇದು ಜಾರಿಯಾಗುತ್ತದೆ ಎಂದು ಬಿಜೆಪಿಯವರು ಚುನಾವಣೆಯ ದೃಷ್ಠಿಯಿಂದ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಮಾಡುತ್ತಿರುವ ಗಿಮಿಕ್ ಆಗಿದೆ ಎಂದರು.
ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವದ ಚಂದ್ರಯಾನ – ಯಶಸ್ವಿಯಾಗಿರುವುದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. ಈ ಯಶಸ್ಸಿನ ಹಿಂದೆ ದುಡಿದಿರುವ ನಮ್ಮ ದೇಶದ ಹೆಮ್ಮೆಯ ಎಲ್ಲಾ ವಿಜ್ಞಾನಿಗಳಿಗೆ, ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಗೋಕುಲ್ದಾಸ್, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತಾ, ಪ್ರಮುಖರಾದ ಶಶಿಶರ ಎಂ.ಜೆ, ಭವಾನಿಶಂಕರ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ ಉಪಸ್ಥಿತರಿದ್ದರು.