ಸುಳ್ಯ:ಖ್ಯಾತ ಚಲನಚಿತ್ರ ನಟ ನವೀನ್ ಡಿ ಪಡೀಲ್ ಕೇಂದ್ರ ಪಾತ್ರದಲ್ಲಿ ನಟಿಸಿದ ಅರೆಭಾಷೆ ಚಲನಚಿತ್ರ ‘ಮೂಗಜ್ಜನ ಕೋಳಿ’ ಚಿತ್ರೀಕರಣ ಪೂರ್ತಿಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ಜೀಟಿಗೆ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದ ಸಂತೋಷ ಮಾಡ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೂಗಜ್ಜನ ಕೋಳಿ ಮಕ್ಕಳ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ತಿಯಾಗಿ ಬಿಡುಗಡೆಗೆ ಸಿದ್ಧವಾಗಿದೆ. ಸುಳ್ಯದ ಸುತ್ತಮುತ್ತಲ್ಲಿನ
ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಇದು ಅರೆಭಾಷೆಯಲ್ಲಿ ನಿರ್ಮಾಣವಾಗಿರುವ ಚಿತ್ರ. ಕನಸು ಪ್ರೊಡಕ್ಷನ್ಸ್ ಎಂಬ ಬ್ಯಾನರಿನಡಿಯಲ್ಲಿ ಕೆ.ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗಲ್ಫ್ ರಾಷ್ಟ್ರದಲ್ಲಿ ಬೆಳೆದ ಕನಸು ಎಂಬ ಬಾಲಕಿ ಪ್ರಥಮ ಬಾರಿಗೆ ತಮ್ಮ ಹೆತ್ತವರ ಊರಾದ ಸುಳ್ಯಕ್ಕೆ ಬರುತ್ತಾಳೆ. ಇಲ್ಲಿನ ಸುಂದರ ಹಸಿರು ಪರಿಸರ ಅವಳಿಗೆ ಹೊಸತು. ಇಲ್ಲಿನ ಪರಿಸರವನ್ನು ತನ್ನದೇ ದೃಷ್ಠಿ ಕೋನದಲ್ಲಿ ನೋಡುತ್ತಾಳೆ. ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾಳೆ.ಈ ಹುಡುಗಿಯ ಪಕ್ಕದ ಮನೆಯಲ್ಲಿ ಗೋವಿಂದ ಅಥವಾ ಮೂಗಜ್ಜ ಎನ್ನುವ ಯಾರಲ್ಲಿಯೂ ಮಾತನಾಡದ ಒರಟ ಮುದುಕ ಇರುತ್ತಾನೆ. ಈ ಮುಗ್ಧ ಹುಡುಗಿ ಹಾಗೂ ಕೋಳಿ ಸಾಕುವ ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಹಾಗೂ ಸಂಬಂಧದ ಕಥೆಯೇ ಮೂಗಜ್ಜನ ಕೋಳಿ.
ತುಳುನಾಡಿನ ಹೆಸರಾಂತ ನಟರಾದ ನವೀನ್ ಡಿ. ಪಡಿಲ್ ಅವರ ಮೂಗಜ್ಜನ ಪಾತ್ರವು ಚಿತ್ರದ ಮುಖ್ಯ ಆಕರ್ಷಣೆಯಾದರೆ ಮುಖ್ಯ ಭೂಮಿಕೆಯಾದ ಕನಸು (ಬಾಬೆಕ್ಕ) ಎಂಬ ಮಗುವಿನ ಪಾತ್ರದಲ್ಲಿ ಕುಮಾರಿ ಗೌರಿಕ ದೀಪುಲಾಲ್ ನಟಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಖ್ಯಾತ ನಟ-ನಟಿಯರಾದ ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯ,ರಾಘವೇಂದ್ರ ಭಟ್, ಜೀವನ್ ರಾಮ್ ಸುಳ್ಯ, ಸಾನಿಧ್ಯ, ಹಾಗೂ ಇತರ ಮಕ್ಕಳು ನಟಿಸಿದ್ದಾರೆ.
ಜೀವನ್ ರಾಮ್ ನಿರ್ದೇಶನ ಮಾಡಿದ ಅಮರಸುಳ್ಯ ಸ್ವಾತಂತ್ರ್ಯ ಹೋರಾಟ 1837 ನಾಟಕದ ದೃಶ್ಯ ತುಣುಕುಗಳು ಕೂಡಾ ಈ ಚಿತ್ರದಲ್ಲಿದೆ, ಸುಳ್ಯ ಪೇಟೆ, ಕೇರ್ಪಳ, ಕುಡೆಕಲ್ಲು, ಪದ್ಮಶ್ರೀ ಗಿರೀಶ್ ಭಾರದ್ವಜ್ ಇವರು ನಿರ್ಮಿಸಿದ ತೂಗು ಸೇತುವೆಗಳು, ಬೆಳ್ಳಾರೆಯ ಖಜಾನೆ ಹೀಗೆ ಈ ಚಿತ್ರದ ಪೂರ್ತಿ ಚಿತ್ರೀಕರಣವು ಸುಳ್ಯದ ಸುತ್ತಮುತ್ತಲು ನಡೆದಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ, ಖ್ಯಾತ ಸಂಕಲನಕಾರ ಸುರೇಶ್ ಅರಸ್ ಇವರು ಚಿತ್ರದ ಸಂಕಲನ ಮಾಡಿದ್ದರೆ, ರಾಷ್ಟ್ರಪ್ರಶಸ್ತಿ ವಿಜೇತರಾದ ಖ್ಯಾತ ಮೇಕಪ್ ಮ್ಯಾನ್ ರಂಜಿತ್ ಅಂಬಾಡಿ ಈ ಚಿತ್ರಕ್ಕೆ ಮೇಕಪ್ ಮಾಡಿದ್ದಾರೆ. ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಈ ಚಿತ್ರದ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ವಿಷ್ಣುಪ್ರಸಾದ್ ಛಾಯಾಗ್ರಾಹಕರಾಗಿದ್ದಾರೆ. ವಿನೀತ್ ವಟ್ಕಂಕುಳತ್ ಕಲ್ಪನೆಯ ಕಥೆಗೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಮೇಶ್ ಶೆಟ್ಟಿಗಾರ್ ಬರದಿದ್ದಾರೆ. ಚಿತ್ರಕ್ಕೆ ಸುಳ್ಯದ ಯುವ ಲೇಖಕಿ ರಮ್ಯಶ್ರೀ ನಡುಮನೆ ಅರೆಭಾಷೆ ಸಂಭಾಷಣೆಯನ್ನು ರಚಿಸಿದ್ದಾರೆ. ಹಿನ್ನಲೆ ಗಾಯನ ಆಶಾಭಟ್. ಚಿತ್ರವು ಸೆನ್ಸಾರ್ ಮುಗಿಸಿ ಮಕ್ಕಳ ಸಿನೆಮಾ ಎಂಬ ಸರ್ಟಿಫಿಕೇಟ್ ಪಡೆದಿದೆ.
ಚಿತ್ರದ ಹಿನ್ನಲೆಯಲ್ಲಿ ಕಲಾನಿರ್ದೇಶಕರಾಗಿ ರಾಜೇಶ್ ಬಂದ್ಯೋಡು, ಹಿನ್ನಲೆ ಸಂಗೀತ ನಿರ್ದೇಶಕರಾಗಿ ದೀಪಾಂಕುರನ್, ಹಾಡು ಸಂಯೋಜನೆ ಮಾಡಿದವರು ಅರುಣ್ ಗೋಪನ್, ವಸ್ತ್ರಾಲಂಕಾರ ಮೀರಾ ಸಂತೋಷ್, ಶಬ್ದ ವಿನ್ಯಾಸ ವಾಸುದೇವನ್, ಕಲರಿಸ್ಟ್ ಆಗಿ ಮುರುಗೇಶನ್, ಸಹ ನಿರ್ದೇಶಕರಾಗಿ, ಅವಿನಾಶ್ ರೈ, ಕಾರ್ಯನಿರ್ವಾಹಕರಾಗಿ ವಿಜಯ್ ಮಯ್ಯ, ಟೈಟಲ್ ಡಿಸೈನರ್ ಆಗಿ ಕರಣ್ ಆಚಾರ್ಯ, ಪೋಸ್ಟರ್ ಡಿಸೈನರ್ ಆಗಿ ಗಿರೀಶ್ ಆಚಾರ್ಯ, ಗ್ರಾಫಿಕ್ಸ್ ಮಾಡಿದವರು ಗ್ರೀನ್ ಸ್ಪೇಸ್ ಚಾಮುಂಡೇಶ್ವರಿ ಸ್ಟುಡಿಯೋ, ಪೋಸ್ಟ್ ಪ್ರೊಡಕ್ಷನ್ ನಿರ್ವಹಣೆ ಚಾಮುಂಡೇಶ್ವರಿ ಸ್ಟುಡಿಯೋ, ಸಹ ನಿರ್ದೇಶಕರಾಗಿ ರವಿ ವರ್ಕಾಡಿ, ರಮ್ಯಶ್ರೀ ನಡುಮನೆ, ಗಿರೀಶ್ ಆಚಾರ್ಯ, ಪ್ರದೀಪ್ ರಾವ್, ಸ್ಟಿಲ್ಸ್ ಕೀರ್ತನ್ ಅಡ್ಡಂತಡ್ಕ ಮುಂತಾದವರಿದ್ದಾರೆ.
ಪುತ್ತೂರಿನವರಾದ ಪಿ ವಿಷ್ಣುಪ್ರಸಾದ್ ಸಿನಿಮಾಟೋಗ್ರಫಿ ನಿರ್ವಹಿಸಿದ್ದಾರೆ. ಸಿನಿಮಾದ ಕಾರ್ಯ ನಿರ್ವಹಣೆಯನ್ನು ಮಿಲನ್ ಬಾಳಿಕಲ ನಿಭಾಯಿಸಿದ್ದಾರೆ. ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 5ರ ಫೈನಲಿಸ್ಟ್ & ಡ್ರಾಮಾ ಜೂನಿಯರ್ಸ್ ಸೀಸನ್ 4 ರ ರನ್ನರ್ ಅಪ್ ಖ್ಯಾತಿಯ ಸಾನಿಧ್ಯ ಆಚಾರ್ಯ ಉಡುಪಿ, ಓಂಕಾರ ತಲಪ್ಪಾಡಿ ಜೊತೆಗೆ ,
ಸುಳ್ಯ ಪೆರಾಜೆಯ ಯಕ್ಷಗಾನ ಕಲಾವಿದೆ ಸಾಯಿ ನಕ್ಷತ್ರ,
ಗೌರವ್ ಪೆರಾಜೆ,ಲಾಸ್ಯ ಕಲ್ಲುಗುಂಡಿ, ಲಾಲಿತ್ಯ ಕೊಲ್ಲಮೋಗ್ರ, ಸ್ವರ ಸುಳ್ಯ,
ಲೇಖನ ಕೊಯನಾಡು, ಶಿವರಾಜ್. ಮುಂತಾದ ಸುಳ್ಯ ನಿವಾಸಿಗಳು ಕೂಡ ಅಭಿನಯಿಸಿದ್ದಾರೆ.ಸೂಕ್ತ ಸಮಯ ನೋಡಿಕೊಂಡು ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ ಸಂತೋಷ್ ಮಾಡ ತಿಳಿಸಿದ್ದಾರೆ.