ಸುಳ್ಯ:ಹಲವು ದಿನಗಳಿಂದ ಮುಂಗಾರು ದುರ್ಬಲಗೊಂಡಿದ್ದು ಮಳೆ ನಾಪತ್ತೆಯಾಗಿದೆ. ಉರಿ ಬಿಸಿಲಿನ ಹಾಗೂ ವಿಪರೀತ ಸೆಕೆಯ ವಾತಾವರಣ ಉಂಟಾಗಿದ್ದು ಬೇಸಿಗೆ ನೆನಪಿಸುತಿದೆ. ಸುಮಾರು 15ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಮಳೆ ದೂರ ಆಗಿದೆ. ಸುಳ್ಯ ತಾಲೂಕಿನಲ್ಲಿ ಕಳೆದ 15 ದಿನಗಳಿಂದ ಸರಾಸರಿ ಮಳೆ 10 ಮಿ.ಮಿ.ಗಿಂತಲೂ ಕಡಿಮೆ ಸುರಿದಿದೆ. ಈ ವರ್ಷ ಆರಂಭದಿಂದಲೂ ಮುಂಗಾರು ದುರ್ಬಲವಾಗಿಯೇ ಇತ್ತು. ಜೂನ್ ತಿಂಗಳ
8 ರಂದು ಮುಂಗಾರು ಆರಂಭಗೊಂಡಿದ್ದರೂ ಜೂನ್ ತಿಂಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿತ್ತು. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಿ ತಕ್ಕಮಟ್ಟಿಗೆ ಸುರಿದಿತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಭಾರೀ ಮಳೆಯ ಕೊರತೆ ಉಂಟಾಗಿದೆ. ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯೇ ಸುರಿದಿಲ್ಲ. ಬೇಸಿಗೆ ಕಾಲದಂತೆ ಬಿಸಿಲು, ಸೆಕೆಯ ವಾತಾವರಣ ಉಂಟಾಗಿದೆ. ಈ ಬಾರಿ ಒಟ್ಟು ವಾರ್ಷಿಕ ಸರಾಸರಿ ಮಳೆಯಲ್ಲಿ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ವಾರ್ಷಿಕ ಸರಾಸರಿ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಡುತ್ತಾರೆ.
(ಮಳೆ ದಾಖಲೆ ಚಾರ್ಟ್- ಪಿಜಿಎಸ್ಎನ್ ಪ್ರಸಾದ್).
ಈ ಹಿಂದೆಯೂ ಈ ರೀತಿ ಉಂಟಾಗಿತ್ತು:
ಹಿಂದಿನ ವರುಷಗಳಲ್ಲಿಯೂ ಈ ರೀತಿ ದುರ್ಬಲ ಮುಂಗಾರು, ಮಳೆಯ ಕೊರತೆ ಉಂಟಾಗಿತ್ತು ಎನ್ನುತ್ತಾರೆ ಹವಾಮಾನ ತಜ್ಞರು ಹಾಗು ಮಳೆ ದಾಖಲೆಗಾರರಾದ ಪಿಜಿಎಸ್ಎನ್ ಪ್ರಸಾದ್ ಬಾಳಿಲ. ಆಗಸ್ಟ್ 16 ರವರೆಗೆ ಹೆಚ್ಚು ಕಡಿಮೆ ಈ ವರ್ಷದಷ್ಟೇ ಮಳೆ ದಾಖಲಾದ ವರ್ಷ ಅಂದರೆ 2012 ಹಾಗೂ 2017 ನೆ ಇಸವಿ. 2012 ರಲ್ಲಿ ಆಗಸ್ಟ್ 16 ರ (93) ನಂತರದ 60 ದಿನಗಳಲ್ಲಿ 1764 ಮಿ.ಮೀ.ಮಳೆ ದಾಖಲಾಗಿ, ವಾರ್ಷಿಕ ಸರಾಸರಿಯ ಹತ್ತಿರ ತಲುಪಿತ್ತು. ಆ ವರ್ಷ ಆಗಸ್ಟ್ 25 ರಿಂದ ಸೆ.12 ರ ವರೆಗೆ 19 ದಿನದಲ್ಲಿ 739 ಮಿ.ಮೀ.ನಷ್ಟು ಉತ್ತಮ ಮಳೆ ದಾಖಲಾಯಿತು. ಆ ವರ್ಷ ಅಕ್ಟೋಬರ್, ನವಂಬರದಲ್ಲೂ ವರುಣ ಉತ್ತಮ ಪ್ರದರ್ಶನ ತೋರಿದ್ದಾನೆ. ಅದೇ 2017 ರಲ್ಲಿ ಆಗಸ್ಟ್ 16ರ (101) ನಂತರ 49 ದಿನಗಳಲ್ಲಿ ಕೇವಲ 959 ಮಿ.ಮೀ. ಮಳೆಯಷ್ಟೇ ದಾಖಲಾಗಿ ವಾರ್ಷಿಕ ಸರಾಸರಿಯ ಶೇ 23 ರಷ್ಟು ಮಳೆಯ ಕೊರತೆ ಉಂಟಾಗಿತ್ತು. ಈ ವರ್ಷದಲ್ಲಿ ಇದುವರೆಗೆ 82 ದಿನಗಳಲ್ಲಿ 2566 ಮಿ.ಮೀ.ಮಳೆ ದಾಖಲಾಗಿದೆ. ಕನಿಷ್ಟವೆಂದರೂ ಇನ್ನೂ 65 ದಿನ ಮಳೆ ಬರಲಿದೆ. ಶೇ15 ರಿಂದ 20 ರಷ್ಟು ಕೊರತೆ ಅಂದರೂ 1000 ದಿಂದ 1200 ಮಿ.ಮೀ.ಮಳೆ ಬರಬಹುದು ಎಂದು ಪಿಜಿಎಸ್ಎನ್ ಪ್ತಸಾದ್ ಹೇಳುತ್ತಾರೆ.(ಮಳೆ ದಾಖಲೆಯ ಚಾರ್ಟ್ ಗಮನಿಸಿ).
ಹವಾಮಾನ ಇಲಾಖೆಯ ಮುನ್ಸೂಚನೆ ಏನು:
ಆಗಸ್ಟ್ 24ರವರೆಗೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದಗದು ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.