ಸುಳ್ಯ:ಸುಳ್ಯ ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಿಸಲು ಪ್ರಯತ್ನ ನಡೆಸಬೇಕು ಎಂದು ನಗರ ಪಂಚಾಯತ್ ಸದಸ್ಯರು ಶಾಸಕಿ ಭಾಗೀರಥಿ ಮುರುಳ್ಯ ಅವರಲ್ಲಿ ಬೇಡಿಕೆ ಮುಂದಿರಿಸಿದ್ದಾರೆ. ಸುಳ್ಯ ನಗರ ಪಂಚಾಯತ್ಗೆ ಆಗಮಿಸಿದ ಶಾಸಕರ ಜೊತೆ ನ.ಪಂ.ಸದಸ್ಯರು ಸಂವಾದ ನಡೆಸಿದರು. ನ.ಪಂ.ಸದಸ್ಯ ವಿನಯಕುಮಾರ್ ಕಂದಡ್ಕ ಮಾತನಾಡಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಿಸುವ ಪ್ರಯತ್ನ
ನಡೆಸಬೇಕು. ಅಲ್ಲದೆ ರಸ್ತೆಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನದ ಬೇಡಿಕೆ ಇರಿಸಬೇಕು.ನಗರದ ಅಭಿವೃದ್ಧಿಗೆ ಸರಕಾರದಿಂದ 5 ಕೋಟಿ ಅನುದಾನ ನೀಡುತ್ತದೆ. ಸುಳ್ಯ ನಗರದಲ್ಲಿ ಸುಮಾರು 140 ಕಿ.ಮಿ.ರಸ್ತೆ ಇದೆ. ಈ ಅನುದಾನ ಸಾಕಾಗುವುದಿಲ್ಲ. ಆದುದರಿಂದ ನಗರಾಭಿವೃದ್ಧಿಗೆ ಸರಕಾರ ಅನುದಾನ ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಬೇಕು ಎಂದು ವಿನಯಕುಮಾರ್ ಕಂದಡ್ಕ ಆಗ್ರಹಿಸಿದರು.

ಸದಸ್ಯ ಶರೀಫ್ ಕಂಠಿ ಮಾತನಾಡಿ ನಗರ ವ್ಯಾಪ್ತಿಯಲ್ಲಿ ವಸತಿ ಅನುದಾನ ಮಂಜೂರಾದ ಫಲಾನುಭವಿಗಳಿಗೆ ಒಂದು ಕಂತು ಮಾತ್ರ ಬಿಡುಗಡೆ ಆಗಿದೆ. ಮನೆ ಮುರಿದು ಅರ್ಧ ಕೆಲಸ ಆಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದುದರಿಂದ ವಸತಿ ಯೋಜನೆ ಮುಂದಿನ ಕಂತು ಆದಷ್ಟು ಬೇಗ ಬಿಡುಗಡೆ ಮಾಡಲು ಸರಕಾರಕ್ಕೆ ಆಗ್ರಹಿಸಬೇಕು ಎಂದು ಹೇಳಿದರು. ನಗರ ವ್ಯಾಪ್ತಿಯಲ್ಲಿ 54 ಮಂದಿಗೆ ವಸತಿ ಮಂಜೂರಾಗಿದ್ದು ಅವರಿಗೆ ಒಂದು ಕಂತು ಮಾತ್ರ ಬಂದಿದೆ ಎಂದು ಹೇಳಿದರು.
ನಗರ ಪಂಚಾಯತ್ನಲ್ಲಿ ಇಂಜಿನಿಯರ್, ಅರೋಗ್ಯ ನಿರೀಕ್ಷಕರು ಹಾಗೂ ಕಂದಾಯ ನಿರೀಕ್ಷಕರು ಸೇರಿ ಪ್ರಮುಖ ಹುದ್ದೆಗಳು ಖಾಲಿ ಇದ್ದು ನಗರ ಪಂಚಾಯತ್ ಕೆಲಸಗಳು ಆಗುತ್ತಿಲ್ಲ. ಆದುದರಿಂದ ಪೂರ್ಣಾವಧಿಗೆ ಇಂಜಿನಿಯರ್, ಆರೋಗ್ಯ ನಿರೀಕ್ಷಕರು ಹಾಗೂ ಕಂದಾಯ ನಿರೀಕ್ಷಕರ ನೇಮಕಾತಿ ಮಾಡಬೇಕು ಎಂದು ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ ಹಾಗೂ ಶರೀಫ್ ಕಂಠಿ ಹೇಳಿದರು.
ಶಾಸಕರು ಹಾಗೂ ಸಂಸದರು ನಗರ ಪಂಚಾಯತ್ ಸಾಮಾನ್ಯ ಸಭೆಗೆ ಬರಬೇಕು ಎಂದು ಸದಸ್ಯರಾದ ಬಾಲಕೃಷ್ಣ ಭಟ್ ಆಗ್ರಹಿಸಿದರು.
ಮಹಾಯೋಜನೆಯ ಕಾನೂನನ್ನು ಸರಳೀಕರಣ ಮಾಡಿ ಅನುಷ್ಠಾನ ಮಾಡಬೇಕು. ಯೋಜನೆ ಮರು ಪರಿಶೀಲನೆಗೆ ಸರಕಾರಕ್ಕೆ ಕಳುಹಿಸಲಾಗುವುದು. ಈ ಸಂದರ್ಭದಲ್ಲಿ ಕಾನೂನು ಸರಳೀಕರಣ ಮಾಡಬೇಕು ಎಂದು ಸದಸ್ಯ ವಿನಯಕುಮಾರ್ ಕಂದಡ್ಕ ಹೇಳಿದರು. ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಒತ್ತಡ ತರಬೇಕು ಎಂದು ಹೇಳಿದರು.
ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕರು ನಗರ ಪಂಚಾಯತ್ನ ಅಭಿವೃದ್ಧಿ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನ ನಡೆಸುವುದಾಗಿ ಹೇಳಿದರು. ನಗರ ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಡೇವಿಡ್ ಧೀರಾ ಕ್ರಾಸ್ತಾ, ಶಶಿಕಲಾ ನೀರಬಿದಿರೆ, ಶೀಲಾ ಅರುಣಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಬುದ್ದ ನಾಯ್ಕ್, ನಾರಾಯಣ. ಕೆ, ಶರೀಫ್ ಕಂಠಿ, ರಿಯಝ್ ಕಟ್ಟೆಕ್ಕಾರ್, ಪೂಜಿತಾ ಕೇರ್ಪಳ, ಸುಧಾಕರ್, ಪ್ರವಿತಾ ಪ್ರಶಾಂತ್ ಇದ್ದರು. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಸ್ವಾಗತಿಸಿ, ವಂದಿಸಿದರು.