ಸುಳ್ಯ:ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ರಸ್ತೆ ಸುರಕ್ಷತೆ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಹೇಳಿದರು.ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆಯ ಪ್ರಯುಕ್ತ ನಡೆಯುವ ಮಾನವ ಸರಪಳಿ ಕಾರ್ಯಕ್ರಮದ ಬಗ್ಗೆ ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ
ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮದು ಮಲೆನಾಡು ಮತ್ತು ಘಾಟಿ ಪ್ರದೇಶ ಆಗಿರುವ ಕಾರಣದಿಂದ ಮಾನವ ಸರಪಳಿ ಜೊತೆಗೆ ವಾಹನ ರ್ಯಾಲಿಗಳನ್ನು ಆಯೋಜನೆ ಮಾಡಿಕೊಂಡಿದ್ದೇವೆ. ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಕೆಲಸ ಅಧಿಕಾರಿಗಳು ಮಾಡಬೇಕು. ಸುಳ್ಯದ ಪೈಚಾರಿನಿಂದ ಪರಿವಾರಕಾನದ ಉಡುಪಿ ಗಾರ್ಡನ್ ಹೋಟೆಲ್ ವರೆಗೆ ಸುಮಾರು 4.30 ಕಿ.ಮೀ ಉದ್ದದ ಮಾನವ ಸರಪಳಿ ರಚನೆ ಮಾಡಲಾಗುವುದು. ಎಂದ ಅವರು ಕನಕಮಜಲಿನಿಂದ ಸಂಪಾಜೆವರೆಗೆ 14 ಕೇಂದ್ರಗಳನ್ನು ಮಾಡಲಾಗಿದೆ. ಸರಪಳಿಗೆ ಬರುವವರಿಗೆ ಪೊಲೀಸ್ ಇಲಾಖೆ ಸುರಕ್ಷತೆ ಕೊಡಬೇಕು ಎಂದರು.
ಸರಪಳಿಗೆ ಸಂಘ ಸಂಸ್ಥೆಗಳು, ವಿದ್ಯಾರ್ಧಿಗಳು, ಧಾರ್ಮಿಕ ಕೇಂದ್ರಗಳನ್ನು ಸೇರಿಸಿಕೊಂಡು ಶಿಸ್ತುಬದ್ದವಾಗಿ ಮಾನವ ಸರಪಳಿ ನಡೆಯಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ ಸೆ.15ರಂದು ಬೆಳಗ್ಗೆ 9.30-10.30ರ ಅವಧಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ 13 ಪ್ರದೇಶಗಳನ್ನು ಗುರುತಿಸಲಾಗಿದ್ದು, 6 ಕೇಂದ್ರಗಳಲ್ಲಿ ಮಾನವ ಸರಪಳಿ ಹಾಗೂ ಉಳಿದ 7 ಕೇಂದ್ರಗಳಲ್ಲಿ ರ್ಯಾಲಿ ನಡೆಯಲಿದೆ. ಶಾಲಾ ಮಕ್ಕಳು ಮಾನವ ಸರಪಳಿಯಲ್ಲಿ ಭಾಗವಹಿಸುವುದರಿಂದ ಮಳೆ ಬರುವ ಸಂದರ್ಭದಲ್ಲಿ ಒಂದೆಡೆ ನಿಲ್ಲಲು ಹಾಗೂ ಆಹಾರ ವಿತರಣೆಗೆ ಪೂರಕವಾಗುವಂಯತೆ ಎಲ್ಲಾ ವ್ಯವಸ್ಥೆಗಳನ್ನು ನಡೆಸಲು ಸಿದ್ಧತೆಗಳನ್ನು ನಡೆಸಲಾಗಿದೆ. 13 ನೋಡೆಲ್ ಅಽಕಾರಿಗಳು ಹಾಗೂ ಅವರಿಗೆ 30 ಸಹಾಯಕ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿ ಮಾನವ ಸರಪಳಿಯ ಬಗ್ಗೆ ಮಾಹಿತಿ ನೀಡಿದರು.
ಮಾನವ ಸರಪಳಿ ನಡೆಯುವ ಕೇಂದ್ರಗಳಲ್ಲಿ ಈಗಾಗಲೇ ಜನರನ್ನು ಒಟ್ಟು ಸೇರಿಸಿ ಮಾನವ ಸರಪಳಿ ರಚನೆಗೆ ಯೋಜನೆ ರೂಪಿಸಲಾಗಿದೆ. ಉಳಿದ ಕಡೆಗಳಲ್ಲಿ ಇಲಾಖಾವಾರು ವಾಹನಗಳ ಮೂಲಕ ರ್ಯಾಲಿ ನಡೆಯಲಿದೆ. ಹಾಗೂ ಅಲ್ಲಲ್ಲಿ ಅರಣ್ಯ ಇಲಾಖೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ ಎಂದರು. ಸುಳ್ಯ ನಗರಕ್ಕೆ ಸಂಬಂಧಿಸಿದಂತೆ ಪೈಚಾರಿನಿಂದ ಉಡುಪಿ ಗಾರ್ಡನ್ವರೆಗೆ ಮಾನವ ಸರಪಳಿಗೆ ಹೆಚ್ಚುವರಿ ಅಧಿಕಾರಿಗಳ ನಿಯೋಜಿಸಲಾಗಿದ್ದು, ನಗರದ ಎಲ್ಲಾ ಸಂಘ-ಸಂಸ್ಥೆಯವರು ಕೈಜೋಡಿಸಬೇಕು ಎಂದರು.
ವಾಹನ ಸಂಚಾರಕ್ಕೆ ಸಮಸ್ಯೆ ಆಗದಂತೆ ಹಾಗೂ ಸೂಕ್ತ ಸುರಕ್ಷತೆ ಕ್ರಮವಾಗಿ ಪೊಲೀಸ್ ಇಲಾಖೆ ಕ್ರಮ ವಹಿಸಲಿದೆ. ಮಾನವ ಸರಪಳಿ ರಸ್ತೆಯ ಬಲ ಬದಿಯಲ್ಲಿ ನಡೆಯಲಿದ್ದು, ಈ ಹಂತದಲ್ಲಿ ಸುಳ್ಯ ತಾಲೂಕು ವ್ಯಾಪ್ತಿಯ ಕನಕಮಜಲಿನ ಪೆರ್ನಾಜೆಯಿಂದ ಸಂಪಾಜೆ ಗಡಿ ವರೆಗೂ ಪೊಲೀಸರ ನಿಯೋಜನೆ ಇರಲಿದೆ ಎಂದರು. ಆಯಾ ವ್ಯಾಪ್ತಿಯಲ್ಲಿ ಭಾಗವಹಿಸುವ ಶಾಲಾ ವಿದ್ಯಾರ್ಥಿಗಳು, ಸಂಘ-ಸಂಸ್ಥೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡಲು ನಿರ್ದೇಶಿಸಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಸುಳ್ಯ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧನಾಯ್ಕ್, ಮುಖ್ಯಾಧಿಕಾರಿ ಸುಧಾಕರ್, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಪಶುಸಂಗೋಪನಾ ಇಲಾಖೆಯ ಡಾ.ನಿತಿನ್ ಪ್ರಭು, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಬಿಇಒ ಶೀತಲ್, ಸುಳ್ಯ ಎಸೈ ಸರಸ್ವತಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಮತ್ತಿತರರು ಉಪಸ್ಥಿತರಿದ್ದರು.