ಸುಳ್ಯ:ಶಾಂತಿನಗರದಲ್ಲಿ ನಡೆಯುತ್ತಿರುವ ತಾಲೂಕು ಕ್ರೀಡಾಂಗಣ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಸರಕಾರದ ಹಣ ಪೋಲಾಗುತಿದೆ.ಈ ಕುರಿತು ಲೋಕಾಯುಕ್ತ ತನಿಖೆ ನಡೆಸಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ರೀಡಾಂಗಣ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದ್ದು ತೀರಾ ಅವ್ಯವಸ್ಥೆಯಿಂದ ಕೂಡಿದೆ. ಭಾರೀ ಎತ್ತರಕ್ಕೆ
ಮಣ್ಣು ಹಾಕಿರುವ ಕಾರಣ ಕ್ರೀಡಾಂಗಣದ ಕೆಳ ಭಾಗದ ಜನತೆ ಆತಂಕದಿಂದ ಕಳೆಯುವಂತಾಗಿದೆ. ಅಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ಆಗಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕೆ ಸರಿಯಾದ ಪ್ಲಾನ್ ಇಲ್ಲದೆ ಕಾಮಗಾರಿ ನಡೆಸಲಾಗಿದೆ. ಇಲ್ಲಿ ಆಗಿರುವ ಕಾಮಗಾರಿಯ ಬಗ್ಗೆ ಲೋಕಾಯುಕ್ತ ತನಿಖೆಗೆ ಸರಕಾರವನ್ನು ಒತ್ತಾಯಿಸಲಾಗುವುದು ಮತ್ತು ಮುಂದಿನ ನಗರ ಪಂಚಾಯತ್ ಸಭೆಯಲ್ಲಿಯೂ ಲೋಕಾಯುಕ್ತ ತನಿಖೆ ನಡೆಸಲು ನಿರ್ಣಯ ಕೈಗೊಳ್ಳಲು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು. ಸುಳ್ಯ ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಮಳೆಗಾಲಕ್ಕೆ ಯಾವುದೇ ತಯಾರಿ, ಮುಂಜಾಗೃತೆ ಮಾಡಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗುತಿದೆ ಎಂದು ಹೇಳಿದರು.
ಕಾಂಗ್ರೆಸ್ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡುತ್ತಾರೆ. ಅದಕ್ಕೆ ಸರಕಾರ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಅದರ ಅನುಷ್ಠಾನಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕು. ಅರ್ಹರಾದ ಎಲ್ಲರಿಗೂ ಗ್ಯಾರಂಟಿ ಕಾರ್ಡ್ ಯೋಜನೆಗಳು ತಲುಪಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಭಿನಂದನಾ ಪ್ಲೆಕ್ಸ್ಗಳಿಗೆ ಹಾನಿ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರವೀಣ್ ನೆಟ್ಟಾರು ಪತ್ನಿಯವರನ್ನು ಸರಕಾರಿ ಹುದ್ದೆಯಿಂದ ಬಿಡುಗಡೆ ಆಗಿರುವುದು ಸಹಜ ಪ್ರಕ್ರಿಯೆ. ಹಿಂದಿನ ಸರಕಾರದ ಆದೇಶವೇ ಹಾಗಿದೆ. ಮುಂದೆ ಅವರು ಅರ್ಜಿ ಸಲ್ಲಿಸಿದಲ್ಲಿ ಮಾನವೀಯ ನೆಲೆಯಲ್ಲಿ ಅವರನ್ನು ಸರಕಾರಿ ಹುದ್ದೆಯಲ್ಲಿ ಅವರನ್ನು ಸರಕಾರ ಮುಂದುವರಿಸಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಕೆಪಿಸಿಸಿ ಸಂಯೋಜಕ ಎಸ್.ಸಂಶುದ್ದೀನ್, ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಭಟ್, ಡೇವಿಡ್ ಧೀರಾ ಕ್ರಾಸ್ತಾ ಉಪಸ್ಥಿತರಿದ್ದರು.