ಸುಳ್ಯ: ಕಳೆದ ಎರಡೂವರೆ ವರ್ಷದ ತಮ್ಮ ನೇತೃತ್ವದ ಆಡಳಿತ ಅವಧಿಯಲ್ಲಿ ಸುಳ್ಯ ನಗರಕ್ಕೆ 90 ಕೋಟಿ ರೂ ಅನುದಾನ ಬಂದಿದೆ. ನಗರದ ದೀರ್ಘ ಕಾಲದ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿದೆ ಎಂದು ನಗರ ಪಂಚಾಯತ್ ನಿರ್ಗಮನ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಲು ಕಾಲದಿಂದ ಸುಳ್ಯ ನಗರಕ್ಕೆ ದೊಡ್ಡ ಸಮಸ್ಯೆಯಾಗಿದ್ದ ಕಸ ವಿಲೇವಾರಿಯನ್ನು ಸಮರ್ಪಕ
ಮಾಡಲಾಗಿದೆ. ನಗರ ಪಂಚಾಯತ್ ಸುತ್ತಲೂ ತುಂಬಿಡಲಾಗಿದ್ದ ಕಸವನ್ನು ಸಂಪೂರ್ಣ ಸಾಗಿಸಲಾಗಿದೆ. ಕಸ ವಿಲೇವಾರಿಗೆ ಬರ್ನಿಂಗ್ ಮೆಷಿನ್ ಅಳವಡಿಕೆ ಮಾಡಲಾಗಿದೆ. ದೇಶೀಯವಾಗಿ ಸಂಶೋಧನೆ ಮಾಡಿದ ಬರ್ನಿಂಗ್ ಮೆಷಿನ್ ಇನ್ನಷ್ಟು ಅಭಿವೃದ್ಧಿ ಮಾಡಿದಲ್ಲಿ ಅಲ್ಲಿ ಪ್ರತಿ ದಿನ 2000 ಕೆಜಿ ಕಸ ಉರಿಸಿ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ನಗರದ ಕುಡಿಯುವ ನೀರಿನ ಯೋಜನೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. 60 ಕೋಟಿಯ ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು ಟೆಂಡರ್ ಆಗಿದೆ. ಕುರುಂಜಿಗುಡ್ಡೆಯಲ್ಲಿ ಶುದ್ಧೀಕರಣ ಘಟಕ, ನಾಲ್ಕು ಕಡೆಗಳಲ್ಲಿ ಓವರ್ ಹೆಡ್ ಟ್ಯಾಂಕ್, ನೀರು ಸರಬರಾಜು ವ್ಯವಸ್ಥೆ ಆಗಲಿದೆ. ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರ್ತಿಯಾಗಲಿದೆ. 17 ಕೋಟಿ ರೂ ವೆಚ್ಚದಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಾಗಾರಿ ಪೂರ್ತಿಗೊಂಡಿದೆ ಎಂದು ವಿವರಿಸಿದರು.12 ಕೋಟಿ ರೂಗಳ ವಿವಿಧ ರಸ್ತೆ, ಚರಂಡಿ ಅಭಿಯ ಕಾಮಗಾರಿ ನಡೆಸಲಾಗಿದೆ. ನಗರದಲ್ಲಿ ಉತ್ತಮ ವಾತಾವರಣ ಸೃಷ್ಠಿಸಿದ, ಜನರಲ್ಲಿ ವಿಶ್ವಾಸ ಮೂಡಿಸುವ ರೀತಿಯ ಆಡಳಿತ ಸಾಧ್ಯವಾಗಿದೆ. ರಾಜ್ಯ ಸರಕಾರ, ಮಾಜಿ ಸಚಿವರಾದ ಎಸ್.ಅಂಗಾರ, ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು.
ಯಾವುದೇ ಸರಕಾರ ಬಂದರೂ ಸ್ಥಳೀಯ ಸಂಸ್ಥೆಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವ ಇದೆ ಎಂದ ಅವರು ಸ್ಥಳೀಯ ಸಂಸ್ಥೆಗಳನ್ನು ಇನ್ನಷ್ಟು ಗಟ್ಟಿಯಾಗಿ, ಕ್ರಿಯಾಶೀಲವಾಗಿ ಬೆಳೆಸಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗ ಬಹುದು ಎಂದರು. ಸೂಡಾ ವ್ಯವಸ್ಥೆಯ ನ್ಯೂನತೆ ಸರಿ ಪಡಿಸಲು, ನಿವೇಶನ ರಹಿತರಿಗೆ ನಿವೇಶನ ನೀಡಲು, ಒಳಚರಂಡಿ ವ್ಯವಸ್ಥೆ ಸರಿ ಪಡಿಸಲು ಸಾಕಷ್ಟು ಪ್ರಯತ್ನಗಳು ನಡೆಸಿದರೂ ಸಾಧ್ಯವಾಗಲಿಲ್ಲ ಎಂದ ವಿನಯಕುಮಾರ್ ಕಂದಡ್ಕ ನಗರೋತ್ಥಾನ ಯೋಜನೆಗಳ ಕಾಮಗಾರಿಯ ಉಸ್ತುವಾರಿಯನ್ನು ನಗರ ಪಂಚಾಯತ್ಗೆ ನೀಡದ ಕಾರಣ ಕೆಲವು ಕಡೆಗಳಲ್ಲಿ ಕಾಮಗಾರಿಯ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿವೆ. ಅಂತಹಾ ಸಂದರ್ಭದಲ್ಲಿ ಸ್ಥಳೀಯ ಪ್ರತಿನಿಧಿಗಳು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಕುರುಂಜಿಭಾಗ್ ರಸ್ತೆ, ಹಳೆಗೇಟು ಅಡ್ಕ ರಸ್ತೆ, ಕೊಡಿಯಾಲಬೈಲ್ ರಸ್ತೆಗೆ ಅನುದಾನ ಬಿಡುಗಡೆಯಾಗಿತ್ತು. ಇದೀಗ ಹೊಸ ಸರಕಾರ ಕೆಲವು ಕಾಮಗಾರಿಗಳನ್ನು ತಡೆಹಿಡಿದಿರುವ ಮಾಹಿತಿ ಬಂದಿದೆ. ಯಾವ ರಸ್ತೆಗಳ ಅನುದಾನ ರದ್ದಾಗಿದೆ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಪಡೆಯಬೇಕಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸದಸ್ಯರಾದ ಬಾಲಕೃಷ್ಣ ರೈ ದುಗಲಡ್ಕ, ಸುಧಾಕರ ಕುರುಂಜಿಭಾಗ್, ಶೀಲಾ ಅರುಣ ಕುರುಂಜಿ, ಸುಶೀಲಾ ಜಿನ್ನಪ್ಪ ಉಪಸ್ಥಿತರಿದ್ದರು.