ಚೆನ್ನೈ:ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತರಾಗಿದ್ದ ಎಂ.ಎಸ್.ಸ್ವಾಮಿನಾಥನ್ (98) ಅವರು ಚೆನ್ನೈನಲ್ಲಿ ಗುರುವಾರ ನಿಧನರಾಗಿದ್ದಾರೆ.ಹವಾಮಾನ ತಜ್ಞ, ಕೃಷಿ ವಿಜ್ಞಾನಿ, ಸಸ್ಯ ತಳಿವಿಜ್ಞಾನಿಯೂ ಆಗಿದ್ದ ಸ್ವಾಮಿನಾಥನ್ ಅವರು ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ
ವಹಿಸಿದ್ದರು. 1925ರ ಆಗಸ್ಟ್ 7ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದರು. 1971ರಲ್ಲಿ ರೇಮನ್ ಮ್ಯಾಗ್ಸೆಸೆ, 1986ರಲ್ಲಿ ಆಲ್ಬರ್ಟ್ ಐನ್ಸ್ಟೀನ್ ವಿಶ್ವ ವಿಜ್ಞಾನ ಪ್ರಶಸ್ತಿ, ಪದ್ಮಶ್ರೀ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರನ್ನು ‘ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ’ ಎಂದು ಬಣ್ಣಿಸಿದೆ. 1960 ಹಾಗೂ 70ರ ದಶಕದಲ್ಲಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ರೂಪಿಸಲಾದ ಹಸಿರು ಕ್ರಾಂತಿ ಯೋಜನೆಯಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಸಿ.ಸುಬ್ರಮಣಿಯಂ, ಜಗಜೀವನ್ ರಾಮ್ ಅವರೊಂದಿಗೆ ಸ್ವಾಮಿನಾಥನ್ ಕೆಲಸ ಮಾಡಿದ್ದರು.
ಅಧಿಕ ಇಳುವರಿಯ ಭತ್ತ ಹಾಗೂ ಗೋಧಿ ತಳಿಯ ಅಭಿವೃದ್ಧಿಗಾಗಿ 1987ರಲ್ಲಿ ಅವರಿಗೆ ಜಾಗತಿಕ ಆಹಾರ ಬಹುಮಾನ ಲಭಿಸಿತ್ತು. ಅದರಿಂದ ಬಂದ ಹಣದಲ್ಲಿ ಅವರು ಚೆನ್ನೈನಲ್ಲಿ ಎಂ.ಎಸ್.ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನವನ್ನು ಆರಂಭಿಸಿದರು.
ಸ್ವಾಮಿನಾಥನ್ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.