ಲಖನೌ: ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 33 ರನ್ಗಳಿಂದ ಸೋಲಿಸಿತು. ಇದು ಲಖನೌಗೆ ಸತತ ಮೂರನೇ ಜಯ.ವೇಗದ ಬೌಲರ್ ಯಶ್ ಠಾಕೂರ್ (30ಕ್ಕೆ5) ಮತ್ತು ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ(11ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಲಖನೌಗೆ ಜಯ ತಂದಿತು. ಯಶ್, ಐಪಿಎಲ್ನ ಈ
ಆವೃತ್ತಿಯಲ್ಲಿ ಐದು ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಮಾರ್ಕಸ್ ಸ್ಟೊಯಿನಿಸ್ (58, 43 ಎಸೆತ) ಅವರ ಅರ್ಧ ಶತಕ ಮತ್ತು ಪೂರನ್ ಅವರ ಬಿರುಸಿನ 32 ರನ್ಗಳ ನಾಯಕ ಕೆ.ಎಲ್.ರಾಹುಲ್ 33 ರನ್ ನೆರವಿನಿಂದ 5 ವಿಕೆಟ್ಗೆ 163 ರನ್ ಹೊಡೆಯಿತು. ಆದರೆ ಎಲ್ಎಸ್ಜಿ ಬೌಲರ್ಗಳು ಮತ್ತೊಮ್ಮೆ ಈ ಸಾಧಾರಣ ಮೊತ್ತವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪವರ್ಪ್ಲೇ ಅವಧಿಯಲ್ಲಿ ವಿಕೆಟ್ ನಷ್ಟವಿಲ್ಲದೇ 56 ರನ್ ಗಳಿಸಿ ಉತ್ತಮ ಆರಂಭ ಮಾಡಿದ್ದ ಗಿಲ್ ಬಳಗ ನಂತರ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತ ಹೋಯಿತು. ಏಳು ಎಸೆತಗಳಿರುವಂತೆ 129 ರನ್ಗಳಿಗೆ ಆಲೌಟ್ ಆಯಿತು. ಸಾಯಿ ಸುದರ್ಶನ್ (31) ಬಿಟ್ಟರೆ, ಕೊನೆಯಲ್ಲಿ ರಾಹುಲ್ ತೆವಾಟಿಯಾ (30) ಮಾತ್ರ ಕೆಲಮಟ್ಟಿಗೆ ಪ್ರತಿರೋಧ ತೋರಿದರು.