*ರತ್ನಾಕರ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಪ್ರಸಿದ್ಧ ಚಾರಣ ತಾಣ ಕುಮಾರಪರ್ವತಕ್ಕೆ ಚಾರಣಕ್ಕೆ ಅ.7 ಶನಿವಾರದಿಂದ ಆರಂಭಗೊಳ್ಳಲಿದೆ.ಇದೀಗ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಮತ್ತೆ ಚಾರಣಿಗರಿಗೆ ಚಾರಣ ಮಾಡಲು ಅವಕಾಶ ಒದಗಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈ ಹಿಂದೆ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಬಾರೀ ಮಳೆಯ ಕಾರಣ ಹಾಗೂ
ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್ ಎಲರ್ಟ್ ಘೋಷಿಸಿದ ಕಾರಣ ಚಾರಣಿಗರ ಹಿತದೃಷ್ಠಿಯಿಂದ ಕುಮಾರಪರ್ವತ ಚಾರಣ ನಿಷೇಧಿಸಲಾಗಿತ್ತು.ಆದರೆ ಇದೀಗ ಮಳೆ ಇಲ್ಲದ ಕಾರಣ ಚಾರಣವನ್ನು ಪನರ್ ಆರಂಭಿಸಲು ಇಲಾಖೆ ಅವಕಾಶ ಕಲ್ಪಿಸಿದೆ. ಈ ಹಿಂದೆ ಮೇ ತಿಂಗಳಿನಿಂದ ಸೆ.29ರ ತನಕ ಅರಣ್ಯ ಇಲಾಖೆಯು ಬಿರು ಬೇಸಿಗೆ ಮತ್ತು ಅಧಿಕ ಮಳೆಯ ಕಾರಣದಿಂದಾಗಿ ಚಾರಣೀಗರಿಗೆ ಕುಮಾರಪರ್ವತ ಪ್ರಯಾಣಕ್ಕೆ ನಿರ್ಭಂಧ ವಿದಿಸಿತ್ತು.ಸೆ.30ರಿಂದ ನಿರ್ಬಂಧ ತೆರವುಗೊಳಿಸಿ ಚಾರಣಕ್ಕೆ ಮುಕ್ತ ಅವಕಾಶ ನೀಡಲಾಗಿತ್ತು.ಆದರೆ ಅ.3ರಿಂದ ಭಾರೀ ಮಳೆಯ ಕಾರಣ ಚಾರಣಕ್ಕೆ ನಿರ್ಬಂಧ ವಿದಿಸಲಾಗಿತ್ತು.
ಸ್ವಚ್ಚತೆಗೆ ಇಲಾಖೆ ಕ್ರಮ:
ಮತ್ತೆ ಕುಮಾರಪರ್ವತ ಚಾರಣ ಆರಂಭಗೊಳ್ಳಲಿರುವುದರಿಂದ ಪರ್ವತದ ದಾರಿಯಲ್ಲಿ ಮತ್ತು ಪರ್ವತದಲ್ಲಿ ಸ್ವಚ್ಚತೆ ಕಾಪಾಡಲು ವಿಶೇಷ ವ್ಯವಸ್ಥೆಯನ್ನು ಇಲಾಖೆ ಮಾಡಿದೆ. ಕುಮಾರಪರ್ವತ, ಗಿರಿಗದ್ದೆ, ಕಲ್ಲಚಪ್ಪರ ಸೇರಿದಂತೆ ಪರ್ವತಾರೋಹಣದ ಹಾದಿಯಲ್ಲಿ ಸ್ವಚ್ಚತೆ ಕಾಪಾಡಲು ಬೇಕಾದ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಚತಾ ಜಾಗೃತಿ ಮೂಡಿಸುವ ಸೂಚನಾ ಫಲಕವನ್ನು ಅಲ್ಲಲ್ಲಿ ಅಳವಡಿಸಿ ಚಾರಣೀಗರಲ್ಲಿ ಜಾಗೃತಿ ಮಾಡಿಸುವ ಕಾರ್ಯ ಮಾಡಲಾಗಿದೆ.ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯದಂತೆ ನಿರ್ಬಂಧವಿದಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಅಲ್ಲಲ್ಲಿ ಕಸದ ತೊಟ್ಟಿಗಳ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಿದೆ.
ಚಾರಣೀಗರ ಸ್ವರ್ಗ:
ಸುಬ್ರಹ್ಮಣ್ಯದಿಂದ ಸುಮಾರು 13 ಕಿ.ಮೀ. ಕಾಡು ಗುಡ್ಡಬೆಟ್ಟಗಳಲ್ಲಿ ಚಾರಣ ನಡೆಸಿ ಕುಮಾರಪರ್ವತವನ್ನು ತುತ್ತ ತುದಿಯನ್ನೇರಬಹುದು. ಸುಮಾರು 5 ಕಿ.ಮೀ. ದೂರ ಕ್ರಮಿಸಿದಾಗ ದಾರಿ ಮಧ್ಯೆ ಗಿರಿಗದ್ದೆ ಎಂಬಲ್ಲಿ ಜೋಯಿಸರ ಮನೆ ದೊರಕುತ್ತದೆ. ಇಲ್ಲಿ ಚಾರಣಿಗರಿಗೆ ಊಟ ವ್ಯವಸ್ಥೆ, ಉಪಹಾರ, ನೀರಿನ ವ್ಯವಸ್ಥೆ ದೊರಕುತ್ತದೆ.ಬಹುತೇಕ ಚಾರಣಿಗರು ಇವರ ಮನೆಯಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ತಮ್ಮ ಪ್ರಯಾಣವನ್ನು ಆರಂಭಿಸುತ್ತಾರೆ. ಮೇಲೇರಲು ಅಸಾಧ್ಯವೆನ್ನುವ ಚಾರಣಿಗರಿಗೆ ರಾತ್ರಿ ಉಳಿದುಕೊಳ್ಳಲು ತಮ್ಮ ಮನೆಯಲ್ಲಿ ತಕ್ಕಮಟ್ಟಿನ ವ್ಯವಸ್ಥೆಯನ್ನೂ ಮಾಡುತ್ತಾರೆ.ಅಲ್ಲದೆ ಆಗಮಿಸಿದ ಪ್ರತಿಯೊಬ್ಬರಿಗೂ ಮಜ್ಜಿಗೆ ನೀರಿನ ಪಾನಕ ನೀಡುತ್ತಾರೆ. ಗಿರಿಗದ್ದೆಯಲ್ಲಿ ಚಾರಣಿಗರ ಅನುಕೂಲತೆಗಾಗಿ ಕುಕ್ಕೆ ದೇವಳದ ವತಿಯಿಂದ ಶೌಚಾಲಯ ಹಾಗೂ ಸ್ನಾನದ ಗೃಹವನ್ನು ನಿರ್ಮಿಸಲಾಗಿದೆ.ಇಲ್ಲಿಂದ 8 ಕಿ.ಮೀ. ಮುಂದೆ ಸಾಗಿದರೆ ಕುಮಾರಪರ್ವತವಿದೆ. ಕುಮಾರಪರ್ವತವನ್ನು ಸುಬ್ರಹ್ಮಣ್ಯದಿಂದ ಏರಲು ಹೊರಟರೆ ಲೆಂಕಿರಿಗುಡ್ಡ, ಗಿರಿಗದ್ದೆ, ಅರಣ್ಯ ಇಲಾಖಾ ಚೆಕ್ಪೋಸ್ಟ್, ಕಲ್ಲುಚಪ್ಪರ, ಶೇಷಪರ್ವತ, ಭತ್ತದ ರಾಶಿ, ಸಿದ್ಧ ಪರ್ವತ ಇವೆಲ್ಲವನ್ನು ದಾಟಿ ಕೊನೆಗೆ ಚಾರಣೀಗರ ಸ್ವರ್ಗವಾದ ಕುಮಾರಪರ್ವತ ಸಿಗುತ್ತದೆ