ಕೋಲ್ಕತ್ತ:ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ 5 ವಿಕೆಟ್ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು.ಇದರೊಂದಿಗೆ ನಿತೀಶ್ ರಾಣಾ ಪಡೆಯು ಪ್ಲೇ ಆಫ್ ಪ್ರವೇಶದ ಆಸೆ ಯನ್ನು ಜೀವಂತವಾಗುಳಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಪಂಜಾಬ್, 20 ಓವರ್ಗಳಲ್ಲಿ 7 ವಿಕೆಟ್ ಗಳಿಗೆ 179 ರನ್ ಗಳಿಸಿತು. ಕೋಲ್ಕತ್ತ ನಿಗದಿತ ಓವರ್ಗಳಲ್ಲಿ 5 ವಿಕೆಟ್
ಕಳೆದುಕೊಂಡು 182 ರನ್ ಗಳಿಸಿತು.ಕೊನೆಯ ಎರಡು ಓವರ್ಗಳಲ್ಲಿ ಕೋಲ್ಕತ್ತ ತಂಡಕ್ಕೆ 26 ರನ್ ಬೇಕಿತ್ತು. ಸ್ಯಾಮ್ ಕರನ್ ಎಸೆದ 19ನೇ ಓವರ್ನಲ್ಲಿ ಮೂರು ಸಿಕ್ಸರ್ ಸಿಡಿಸಿದ ಆ್ಯಂಡ್ರೆ ರಸೆಲ್ (42, 23ಎ) ಪಂದ್ಯಕ್ಕೆ ತಿರುವು ನೀಡಿದರು. ಆರ್ಷದೀಪ್ ಸಿಂಗ್ ಎಸೆದ ಕೊನೆಯ ಓವರ್ನಲ್ಲಿ ಗೆಲುವಿಗೆ ಆರು ರನ್ ಬೇಕಿತ್ತು. ಅವರ ಪರಿಣಾಮಕಾರಿ ಬೌಲಿಂಗ್ ಎದುರು ಬ್ಯಾಟರ್ಗಳು ಪರದಾಡಿದರೂ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಬೌಂಡರಿ ಸಿಡಿಸಿ ಜಯ ತಂದುಕೊಟ್ಟರು.ಸವಾಲಿನ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡಕ್ಕಾಗಿ ಜೇಸನ್ ರಾಯ್ (38) ಮತ್ತು ರಹಮಾನುಲ್ಲಾ ಗುರ್ಬಾಜ್ (15) ಮೊದಲ ವಿಕೆಟ್ಗೆ 38 ರನ್ ಸೇರಿಸಿದರು. ಗುರ್ಬಾಜ್ ಔಟಾದ ಬಳಿಕ ನಾಯಕ ನಿತೀಶ್ (51) ಅಲ್ಲದೆ ರಿಂಕು (ಔಟಾಗದೆ 21) ಕೂಡ ಉಪಯುಕ್ತ ಕಾಣಿಕೆ ನೀಡಿದರು. ಟಾಸ್ ಗೆದ್ದ ಪಂಜಾಬ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಶಿಖರ್ ಧವನ್ ಅವರ ಅರ್ಧಶತಕದ ಕೋಲ್ಕತ್ತಗೆ ಸವಾಲಿನ ಗುರಿ ನೀಡಿತ್ತು.
ಧವನ್ (57 ರನ್, 47 ಎ., 4X9, 6X1) ಹೊರತುಪಡಿಸಿ ಇತರ ಬ್ಯಾಟರ್ಗಳು ಪರದಾಡಿದರು.ಶಾರುಕ್ ಖಾನ್ (ಅಜೇಯ 21, 8 ಎ.) ಮತ್ತು ಹರ್ಪ್ರೀತ್ ಬ್ರಾರ್ (ಅಜೇಯ 17, 9 ಎ.) ಅವರು ಕೊನೆಯಲ್ಲಿ ಬೀಸಾಟವಾಡಿದ್ದರಿಂದ ಪಂಜಾಬ್ ತಂಡದ ಸ್ಕೋರ್ ಹಿಗ್ಗಿತು. ವರುಣ್ ಚಕ್ರವರ್ತಿ (26ಕ್ಕೆ 3) ಸ್ಪಿನ್ ಮೋಡಿಯಿಂದ ಗಮನ ಸೆಳೆದರು. ಹರ್ಷಿತ್ ರಾಣಾ 2 ವಿಕೆಟ್ ಪಡೆದರು.