ಕೋಲ್ಕತ್ತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತ ನೈಟ್ರೈಡರ್ಸ್ ತಂಡ 1 ರನ್ ರೋಚಕ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ನಿಗದಿತ 20 ಒವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೋಲ್ಕತ್ತ 222 ರನ್ ಗಳಿಸಿತು. ಗುರಿ ಬೆನ್ನಟ್ಟಿದ
ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಆರ್ಸಿಬಿಗೆ
ಉತ್ತಮ ಆರಂಭ ದೊರೆಯಲಿಲ್ಲ. 7 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ನೆರವಿನಿಂದ18 ರನ್ ಗಳಿಸಿದ ವಿರಾಟ್ ಕೊಹ್ಲಿ ಹಾಗೂ 7 ರನ್ ಗಳಿಸಿದ ನಾಯಕ ಪಾಫ್ ಡುಪ್ಲೆಸಿಸ್ ಮರಳಿದರು. ಬಳಿಕ ಶತಕದ ಜಿತೆಯಾಟ ಆಡಿದ ವಿಲ್ ಜಾಕ್ಸ್ ಮತ್ತು ರಜತ್ ಪಾಟಿದಾರ್ ಪಂದ್ಯವನ್ನು ಆರ್ಸಿಬಿ ಹಿಡಿತಕ್ಕೆ ತಂದು ಗೆಲುವಿನ ನಿರೀಕ್ಷೆ ಮೂಡಿಸಿದರು. ಜಾಕ್ಸ್ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 55 ರನ್ ಸಿಡಿಸಿದರೆ, ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರಜತ್ ಪಾಟಿದಾರ್ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 52 ರನ್ ಬಾರಿಸದರು.
ಆದರೆ ಬಳಿಕ 12 ಎಸೆತಗಳ ಮಧ್ಯೆ 4 ವಿಕೆಟ್ ಕಳೆದುಕೊಂಡ ಆರ್ಸಿಬಿ ಸಂಕಷ್ಟಕ್ಕೆ ಸಿಲುಕಿತು. ಆಂಡ್ರೂ ರಸೆಲ್ ಒಂದೇ ಓವರಿನಲ್ಲಿ ಜಾಕ್ಸ್ ಹಾಗೂ ಪಾಟೀದಾರ್ ವಿಕೆಟ್ ಉರುಳಿಸಿದರೆ, ಸುನಿಲ್ ನರೈನ್ ಕ್ಯಾಮರೂನ್ ಗ್ರೀನ್ ಹಾಗೂ ಮಹಿಪಾಲ್ ಲ್ಯಾಮ್ರೋರ್ಗೆ ಪೆವಿಲಿಯನ್ ಹಾದಿ ತೋರಿಸಿದರು.ಈ ಹಂತದಲ್ಲಿ ಜೊತೆಯಾದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಹಾಗೂ ಸುಯೇಶ್ ಪ್ರಭು ದೇಸಾಯ್ ರಕ್ಷಣಾತ್ಮಕ ಆಟದ ಮೂಲಕ ಸ್ಕೋರ್ ಏರಿಸಿದರು. ಆದರೆ 24 ರನ್ ಗಳಿಸಿದ ಪ್ರಭು ದೇಸಾಯ್ ಹಾಗೂ 25 ರನ್ ಗಳಿಸಿದ ಕಾರ್ತಿಕ್ ಓಟ್ ಆದರು.ಕೊನೆಯಲ್ಲಿ 3 ಸಿಕ್ಸರ್ ಸಹೀತ 6 ಎಸೆತಗಳಲ್ಲಿ 20 ರನ್ ಗಳಿಸಿದ ಕರಣ್ ಶರ್ಮ ಹೋರಾಟ ನಡೆಸಿದರೂ ಗೆಲುವು ಒಲಿಯಲಿಲ್ಲ.
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ನಾಯಕ
ಶ್ರೇಯಸ್ ಅಯ್ಯರ್ 50, ಸಾಲ್ಟ್ 48 ರನ್ ಬಾರಿಸಿದರೆ, ರಿಂಕು ಸಿಂಗ್ 24, ರಸ್ಸೆಲ್ 27, ರಣ್ದೀಪ್ ಸಿಂಗ್ 9 ಎಸೆತಗಳಲ್ಲಿ 24 ರನ್ ಬಾರಿಸಿದರು. ಬೆಂಗಳೂರು ಪರ ಗ್ರೀನ್, ದಯಾಳ್ ತಲಾ 2 ವಿಕೆಟ್ ಪಡೆದರು. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಸೋಲುಂಡಿರುವ ಫಫ್ ಡುಪ್ಲೆಸಿ ಬಳಗಕ್ಕೆ ಪ್ಲೇಆಫ್ ಹಾದಿ ಕಠಿಣವಾಗಿದೆ.