ಸುಳ್ಯ:ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಬಲು ದೊಡ್ಡದು.ಮಾಧ್ಯಮಗಳ ಪ್ರತಿಯೊಂದು ವರದಿಗಳೂ ಕಾನೂನಿನ ಚೌಕಟ್ಟಿನಲ್ಲಿ ಮತ್ತು ಮಾನವೀಯ ನೆಲೆಗಟ್ಟಿನಲ್ಲಿದ್ದರೆ ಸಮಾಜದ ಸುಧಾರಣೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಬಲ್ಲುದು ಎಂದು ಸುಳ್ಯ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಈರಯ್ಯ ದೂಂತೂರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ
ವತಿಯಿಂದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪತ್ರಿಕೆಗಳು ಜ್ಞಾನದ ದೊಡ್ಡ ಭಂಡಾರ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪತ್ರಿಕೆಗಳು ದೊಡ್ಡ ಆಗರ ಎಂದ ಅವರು ಒಂದೇ ವಿಚಾರವನ್ನು ವಿವಿಧ ಪತ್ರಿಕೆಗಳಲ್ಲಿ ವಿಭಿನ್ನ ದೃಷ್ಠಿಕೋನದಲ್ಲಿ ವ್ಯಾಖ್ಯಾನಿಸುವುದನ್ನು ಕಾಣಬಹದು. ಪತ್ರಿಕೆಗಳ ಸಂಪಾದಕೀಯ ಓದುವುದೇ ಒಂದು ಅದ್ಭುತ ಅನುಭವ, ಪತ್ರಿಕೆಗಳ ಸಂಪಾದಕೀಯಗಳು ದೊಡ್ಡ ಬದಲಾವಣೆಗೆ ಕಾರಣವಾದ ಇತಿಹಾಸ ಇದೆ ಎಂದು ಹೇಳಿದರು. ಮಾಧ್ಯಮಗಳಲ್ಲಿ
ಬಳಸುವ ಶಬ್ದ ಮತ್ತು ನೀಡುವ ಮಾಹಿತಿಯ ನಿಖರತೆ ಬಹಳ ಮುಖ್ಯವಾದುದು. ಸೈಬರ್ ಅಪರಾಧಗಳು ಸೇರಿದಂತೆ ಯಾವುದೇ ಘಟನೆಗಳು ನಡೆದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಅಪರಾಧಗಳ ಪತ್ತೆ ಶೀಘ್ರ ಸಾಧ್ಯ ಎಂದ ಅವರು ಸುಳ್ಯ ನಗರದ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಧನಾತ್ಮಕ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಬೇಕು:
ಸಮಾರಂಭದಲ್ಲಿ ಉಪನ್ಯಾಸ ನೀಡಿದ ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಭವ್ಯ ಪಿ.ಆರ್.ನಿಡ್ಪಳ್ಳಿ ಮಾತನಾಡಿ ‘ಇಂದು ಪತ್ರಿಕೋದ್ಯಮದ ಮೂಲತತ್ವಗಳು ಮತ್ತು ವ್ಯಾಖ್ಯಾನಕ್ಕಿಂತ ವಿಭಿನ್ನವಾದ ವಾಸ್ತವಿಕತೆ ಇದೆ. ಇದರ ಬಗ್ಗೆ ಪುನರ್ ವಿಮರ್ಶೆ ನಡೆಸಿ ಸಮಾಜದ ಅಭ್ಯುದಯದ ದೃಷ್ಠಿಯಿಂದ ಧನಾತ್ಮಕ ಮತ್ತು ಅಭಿವೃದ್ಧಿ ಪರ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡಬೇಕಾಗಿದೆ ಮತ್ತು ಪತ್ರಕರ್ತ ಸಂವೇದಾನಾಶೀಲತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರನ್ನು ಸನ್ಮಾನಿಸಲಾಯಿತು.
ಯೂನಿಯನ್ನ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಕೋಶಾಧಿಕಾರಿ ಜಯಶ್ರೀ ಕೊಯಿಂಗೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶ್ವಿತ್ ಕಾಳಂಮನೆ ಸ್ವಾಗತಿಸಿ, ಈಶ್ವರ ವಾರಣಾಸಿ ಸನ್ಮಾನ ಪತ್ರ ವಾಚಿಸಿದರು. ಬೃಂದಾ ಪೂಜಾರಿ ಹಾಗೂ ಪೂಜಾಶ್ರೀ ವಿತೇಶ್ ಕಾರ್ಯಕ್ರಮ ನಿರೂಪಿಸಿದರು.