*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಮಾನವ ಕುಲವೂ ಸೇರಿದ ಜೀವ ಸಂಕುಲ ಉಸಿರಾಡಲು ಭೂಮಿ ಸದಾ ಹಸಿರಾಗಿರಬೇಕು.ಪರಿಸರ ನಾಶ, ಅರಣ್ಯಗಳ ಮಾರಣ ಹೋಮದಿಂದ ವರುಷ ಕಳೆದಂತೆ ಭೂಮಿಯ ತಾಪಮಾನ ನೆತ್ತಿ ಸುಡುತಿದೆ. ಬಿಸಿಲ ತಾಪಕ್ಕೆ ಭೂಮಿ ಬತ್ತಿ ಬರಡಾಗಿ ನೀರಿನ ಬವಣೆ ಎದುರಾಗುತಿದೆ. ಮಳೆ ಕಡಿಮೆಯಾಗುತಿದೆ.ಕಾಲ ಚಕ್ರ ವೈರುಧ್ಯವಾಗಿ ಚಲಿಸುತ್ತಿದೆ. ಪ್ರಾಕೃತಿಕ ಅಸಮತೋಲನ ದಿನೇ ದಿನೇ ಹೆಚ್ಚಾಗುತಿದೆ. ಪರಿಸರ, ಜೀವ ಸಂಕುಲ ಉಳಿದು ಸಮೃದ್ಧ ಮಳೆ, ಬೆಳೆ ಬಂದು ಸುಂದರ
ಬದುಕು ರೂಪಿಸಲು ಗಿಡ, ಮರ ಬೆಳೆಸುವುದು ಸಮೃದ್ಧ ಹಸಿರು ಪರಿಸರವನ್ನು ಸೃಜಿಸುವುದೊಂದೇ ಉಪಾಯ. ಇದನ್ನು ಮನಗಂಡಿರುವ ಅರಣ್ಯ ಇಲಾಖೆ ಭೂಮಿಯನ್ನು ಹಸಿರಾಗಿಸಲು ಪಣತೊಟ್ಟಿದೆ. ಅದಕ್ಕಾಗಿ ಈ ಬಾರಿ ಸುಬ್ರಹ್ಮಣ್ಯ ಉಪವಿಭಾಗದ ಸುಳ್ಯ, ಪಂಜ ಹಾಗೂ ಸುಬ್ರಹ್ಮಣ್ಯ ವಲಯಗಳಲ್ಲಿ ಸೇರಿ ಒಟ್ಟು 3.4 ಲಕ್ಷ ಗಿಡಗಳನ್ನು ಬೆಳೆಸಿದೆ. ಅರಣ್ಯ ಇಲಾಖೆಯ ನೆಡುತೋಪುಗಳಲ್ಲಿ ನೆಡಲು ಮತ್ತು ಸಾರ್ವಜನಿಕರಿಗೆ ವಿತರಣೆಗೆ ಈ ಗಿಡಗಳನ್ನು ಬೆಳೆಸಲಾಗಿದೆ. ಸುಳ್ಯ ವಲಯದಲ್ಲಿ ಒಂದು ಲಕ್ಷ ಗಿಡ ಬೆಳೆಸಲಾಗಿದೆ. ಮೇದಿನಡ್ಕದ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ ವಿವಿಧ ತಳಿಯ ಗಿಡಗಳನ್ನು ಬೆಳೆಸಲಾಗಿದ್ದು 50 ಸಾವಿರ ಗಿಡಗಳನ್ನು ಸಾರ್ವಜನಿಕ ವಿತರಣೆಗೆ ಮತ್ತು 50 ಸಾವಿರ ಗಿಡಗಳು ನೆಡುತೋಪುಗಳಲ್ಲಿ ಬೆಳೆಸಲು ಮೀಸಲಿರಿಸಲಾಗಿದೆ.
ಪಂಜ ವಲಯದಲ್ಲಿ ಒಂದು ಲಕ್ಷ ಗಿಡ ಬೆಳೆಸಲಾಗಿದ್ದು 48 ಸಾವಿರ ಸಾರ್ವಜನಿಕರಿಗೆ ವಿತರಣೆಗೆ ಮತ್ತು 52 ಸಾವಿರ ಅರಣ್ಯದಲ್ಲಿ ನೆಡಲಾಗುತ್ತದೆ. ಸುಬ್ರಹ್ಮಣ್ಯ ವಲಯದಲ್ಲಿ 61 ಸಾವಿರ ಗಿಡ ಅರಣ್ಯದಲ್ಲಿ ನೆಡಲು ಮತ್ತು 43 ಸಾವಿರ ಗಿಡ ಸಾರ್ವಜನಿಕ ವಿತರಣೆಗೆ ಮೀಸಲಿರಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವೈವಿಧ್ಯಮ ಗಿಡಗಳ ಹಸಿರು ರಾಶಿ:
ಮೂರು ವಲಯಗಳ ಸಸ್ಯ ಕ್ಷೇತ್ರದಲ್ಲಿ ಸುಮಾರು 25ಕ್ಕೂ ಹೆಚ್ಚು ವೈವಿಧ್ಯ ಗಿಡಗಳನ್ನು ಬೆಳೆಸಲಾಗಿದೆ.ಪುನರ್ಪುಳಿ, ಕಾಯಿದೂಪ, ಉಂಡೆಹುಳಿ, ದಾಲ್ಟಿನ್ನಿ, ಕಿರಾಲ್ಯೋಗಿ, ಹಂದಿ ಬೆತ್ತ, ಬೀಟೆ, ನಾಗರ ಬೆತ್ತ, ರಾಂಪತ್ರೆ ಬಿದಿರು, ನೆಲ್ಲಿ, ಮಾವು,ಮಂತು ಹುಳಿ, ಶಾಂತಿ, ಮಹಾಗನಿ, ಹಲಸು, ಹೆಬ್ಬಲಸು, ಬಾದಾಮಿ, ಅಟ್ಟೆ, ಹೊಂಗೆ, ಅಂಟುವಾಳ, ನೇರಳೆ, ಬೈಲ ಹೊನ್ನೆ ಹೀಗೆ ಸಸ್ಯ ಕ್ಷೇತ್ರದಲ್ಲಿ ವೈವಿಧ್ಯ ಗಿಡಗಳ ರಾಶಿ ನಳ ನಳಿಸುತಿವೆ. ಸಾರ್ವಜನಿಕರಿಗೆ ವಿವಿಧ ತಳಿಯ ಮತ್ತು ವಿವಿಧ ಅಳತೆಯ ಗಿಡಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.
ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆ:
ಗಿಡದ ಗಾತ್ರಕ್ಕನುಸಾರವಾಗಿ ದರ ವಿಧಿಸಲಾಗುತ್ತದೆ.ಸುಳ್ಯ ವಲಯದ ಮೇದಿನಡ್ಕದ ಕೇಂದ್ರೀಯ ಸಸ್ಯ ಕ್ಷೇತ್ರದಲ್ಕಿ
ವಿವಿಧ ಗಾತ್ರದ ಗಿಡಗಳು ಲಭ್ಯವಿದ್ದು ಚಿಕ್ಕ ಗಿಡಕ್ಕೆ 6 ರೂ ಮತ್ತು ದೊಡ್ಡ ಗಿಡಕ್ಕೆ 23 ರೂಗೆ ನೀಡಲಾಗುತ್ತಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ. ಗಿಡ ಬೆಳೆಸುವ ಕೃಷಿಕರಿಗೆ ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಡಿ ಗಿಡ ಬೆಳೆಸಲು ಪ್ರೋತ್ಸಾಹಕ ಧನವನ್ನೂ ನೀಡಲಾಗುತ್ತದೆ. ಮೊದಲ ವರ್ಷ 35 ರೂ, ಎರಡನೇ ವರ್ಷ 40 ಹಾಗೂ 3ನೇ ವರ್ಷ 50 ಹೀಗೆ ಒಂದು ಗಿಡಕ್ಕೆ 3 ವರ್ಷದಲ್ಲಿ 125 ರೂಗಳನ್ನು ನೀಡಲಾಗುತ್ತದೆ ಎಂದು ಆರ್ಎಫ್ಒ ಮಂಜುನಾಥ್ ಹೇಳುತ್ತಾರೆ.
ಇದೀಗ ಮಳೆಗಾಲ ಬಿರುಸುಗೊಂಡಿದ್ದು ಎಲ್ಲೆಡೆ ವನಮಹೋತ್ಸವ, ಗಿಡ ನೆಡುವ ಕಾರ್ಯಕ್ರಮಗಳು ನಡೆಯುತ್ತಿದೆ. ಅರಣ್ಯ ಇಲಾಖೆಯ ವತಿಯಿಂದ ವನಮಹೋತ್ಸವ ಬಿತ್ತುತ್ಸವಗಳನ್ನು ಹಮ್ಮಿಕೊಳ್ಳಲಾಗುತಿದೆ.
‘ಕಳೆದ ವರ್ಷಗಳಲ್ಲಿ ಅರಣ್ಯ ಇಲಾಖೆಯ ನೆಡು ತೋಪುಗಳಲ್ಲಿ ನೆಟ್ಟ ಗಿಡಗಳಲ್ಲಿ ಶೇ.80ರಷ್ಟು ಗಿಡಗಳು ಚೆನ್ನಾಗಿ ಬೆಳೆದು ಹಸಿರು ಸೂಸುತಿದೆ. ಇಲಾಖೆಯಿಂದ ಅರಣ್ಯ ಬೆಳೆಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಅತ್ಯುತ್ತಮ ಗಿಡಗಳನ್ನು ಬೆಳೆಸಿ ಅರಣ್ಯದಲ್ಲಿ ನೆಡುವುದರ ಜೊತೆಗೆ ಸಾರ್ವಜನಿಕರಿಗೂ ಅರಣ್ಯ ಇಲಾಖೆ ಗಿಡಗಳನ್ನು ವಿತರಿಸುತಿದೆ. ಗಿಡ ಬೆಳೆಸಲು ಪ್ರೋತ್ಸಾಹಕ ಧನವನ್ನೂ ನೀಡಲಾಗುತಿದೆ. ಸಾರ್ವಜನಿಕರು ಲಭ್ಯ ಇರುವ ಸ್ಥಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರಾದ ಸಮೃದ್ಧ ಪರಿಸರವನ್ನು ಬೆಳೆಸಲು ಸಹಕಾರ ನೀಡಬೇಕು’
ಎನ್.ಮಂಜುನಾಥ್
ವಲಯ ಅರಣ್ಯಾಧಿಕಾರಿ. ಸುಳ್ಯ.