ಮಂಗಳೂರು:ಗ್ರಾಮೀಣ ಭಾಗದ ಪತ್ರಿಕೋದ್ಯಮ ನಿಜ ಅರ್ಥದಲ್ಲಿ ಮೌಲ್ಯವರ್ಧನೆ ಆಗಬೇಕಾಗಿದೆ. ಜನರ ಬೇಡಿಕೆಗೆ ಅನುಸಾರವಾದ ಸುದ್ದಿಗಳು, ಗ್ರಾಮೀಣ ಭಾಗದ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ವರದಿಗಳು ಇನ್ನಷ್ಟು ಹೊರ ಬರಬೇಕು ಎಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ನಡೆದ ಪತ್ರಿಕೋದ್ಯಮದ ಹೊಸ ಆಯಾಮಗಳು ‘ ಎಂಬ ವಿಷಯದ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ವಿಚಾರಗೋಷ್ಠಿಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಉದಯವಾಣಿ ದೈನಿಕದ ಸಂಪಾದಕ ಅರವಿಂದ ನಾವಡ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮಧ್ಯೆ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಮಾಧ್ಯಮಗಳ ವಿಶ್ವಾಸಾರ್ಹತೆ ಉಳಿಯಲು ಸಾಮಾಜಿಕ ಮಾಧ್ಯಮಗಳು ಕೂಡ ಅತೀ ಅಗತ್ಯ ಎಂದರು. ಮಾಧ್ಯಮಗಳು ಬಹು ಆಯಾಮಗಳಿಂದ ಓದುಗರ ಅಗತ್ಯತೆಗೆ ಅನುಗುಣವಾಗಿ ಕೆಲಸ ಮಾಡಬೇಕಾಗಿದೆ. ಸುದ್ದಿಗಳ ಆಯ್ಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಹೇಳಿದರು. ಧನಾತ್ಮಕವಾಗಿ ಸವಾಲನ್ನು ಎದುರಿಸಬೇಕು ಎಂದು ಅರವಿಂದ ನಾವಡ ಕರೆ ನೀಡಿದರು.
ವಿಷಯ ಮಂಡಿಸಿದ ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನೀಯ ಸಂಪಾದಕ ಬಿ.ರವೀಂದ್ರ ಶೆಟ್ಟಿ ಮಾತನಾಡಿ ‘ವಿಶ್ವಾಸಾರ್ಹತೆಯಿಂದ ಮಾತ್ರ ಪತ್ರಿಕೋದ್ಯಮ ಉಳಿಯಲು ಸಾಧ್ಯ ಎಂದು ಹೇಳಿದರು. ಸುಳ್ಳು ಸುದ್ದಿಗಳು ಹರಡುವ ಇಂದಿನ ಕಾಲದಲ್ಲಿ ಸತ್ಯವನ್ನು ಹುಡುಕಿ ಸುದ್ದಿ ಕೊಡಬೇಕಾದ ಅನಿವಾರ್ಯತೆ ಇದೆ. ಕಾಲಕ್ಕೆ ತಕ್ಕಂತೆ ಪತ್ರಿಕೆಗಳು ಹೊಸ ರೂಪಾಂತರದ ಮೂಲಕ ಹೊಸ ಹೊಸ ಆಯಾಮಗಳನ್ನು
ಪಡೆದುಕೊಂಡು ಜನರ ವಿಶ್ವಾಸಾರ್ಹತೆಯೊಂದಿಗೆ ಮುನ್ನಡೆದು ತನ್ನ ಪ್ರಸಾರ ಮತ್ತು ಓದುಗರನ್ನು ಹೆಚ್ಚಿಸುತಿದೆ ಎಂದು ಅವರು ಹೇಳಿದರು.
ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಹರ್ಷ ವಿಷಯ ಮಂಡನೆ ಮಾಡಿ ಗ್ರಾಮೀಣ ಭಾಗವು ಮಾನವಾಸಕ್ತ ವರದಿಗಳ ದೊಡ್ಡ ಖಣಜ ಎಂದು ಹೇಳಿದರು.
ಬಳಿಕ ಸಂವಾದ ನಡೆಯಿತು.ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರೀಶ್ ಮೋಟುಕಾನ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.