ಸುಳ್ಯ:ಜೆಡಿಎಸ್ ಎನ್ಡಿಎ ಒಕ್ಕೂಟಕ್ಕೆ ಸೇರ್ಪಡೆ ಆಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಮಂದಿ ಮುಖಂಡರು
ಜೆಡಿಎಸ್ ಗೆ ರಾಜೀನಾಮೆ ನೀಡಿದ್ದಾರೆ. ರಾಜಿನಾಮೆ ನೀಡಿದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ನೂರಕ್ಕೂ ಹೆಚ್ಚು ಮಂದಿ ಕಟ ಕಾಂಗ್ರೆಸ್ ಸೇರ್ಪಡೆಗೆ ನಿರ್ಧಾರ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುಮಾರು 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ
ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದೇವೆ. ಇದೀಗ ಬಿಜೆಪಿಯೊಂದಿಗೆ ಪಕ್ಷ ಮೈತ್ರಿ ಮಾಡಿಕೊಂಡಿದ್ದು ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಜೆಡಿಎಸ್ ಪಕ್ಷದಲ್ಲಿ ದುಡಿದದ್ದು ಭವಿಷ್ಯವನ್ನೇ ಹಾಳು ಮಾಡಿದಂತೆ ಭಾಸವಾಗುತಿದ್ದು, ನಾವು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದರು. ಸುಳ್ಯ ತಾಲೂಕಿನ ಜನತಾದಳ ರಾಜ್ಯ ಸಮಿತಿ ಜಿಲ್ಲಾ ಸಮಿತಿ ತಾಲೂಕು ಸಮಿತಿಯ ಪದಾಧಿಕಾರಿಗಳಾಗಿ ಸುಮಾರು 40 ವರುಷಗಳಿಂದ ಪಕ್ಷದಲ್ಲಿ ಜಾತ್ಯಾತೀತ ಸಿದ್ಧಾಂತ ಸಾಮಾಜಿಕ ನ್ಯಾಯದ ನಿಲುವಿಗೆ ಬದ್ಧರಾಗಿ ಪಕ್ಷದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುತ್ತೇವೆ.
ಪ್ರಕೃತ ಪಕ್ಷದ ರಾಜಕೀಯ ತೀರ್ಮಾನವಾದ ಎನ್ ಡಿ ಎ ಒಕ್ಕೂಟದೊಂದಿಗೆ ಚುನಾವಣಾ ಮೈತ್ರಿ ಯನ್ನು ಮಾಡಿಕೊಂಡಿರುವುದನ್ನು ಒಪ್ಪಿಕೊಳ್ಳಲು ಅಸಾಧ್ಯವಾಗಿರುವುದರಿಂದ ಮತ್ತು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯವಾಗಿರುತ್ತದೆ ಆದುದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡಿದ್ದೇವೆ.
ಸಮಾನ ಮನಸ್ಕರಾದ ನಾವೆಲ್ಲರೂ ಒಟ್ಟಾಗಿ ಜನತಾದಳ ಪಕ್ಷದ ಪ್ರಾಥಮಿಕ ಸದಸ್ಯತಕ್ಕೆ ಈ ದಿನ ರಾಜೀನಾಮೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ, ರಾಜ್ಯಧ್ಯಕ್ಷರಿಗೆ ಸಲ್ಲಿಸಿರುತ್ತೇವೆ.ಈಗಾಗಲೇ ನಮ್ಮನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾದ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳು ಡಿ ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ, ಸೇರ್ಪಡೆಗೊಳ್ಳುವ ಆಹ್ವಾನವನ್ನು ನೀಡಿರುತ್ತಾರೆ. ಆದುದರಿಂದ ಸದ್ಯದಲ್ಲಿಯೇ ಕಾಂಗ್ರೆಸ್ ಸೇರುವುದಾಗಿ ಅವರು ತಿಳಿಸಿದರು.
ರಾಜ್ಯ ಸರ್ಕಾರವು ಆಡಳಿತಕ್ಕೆ ಬಂದ ನಂತರ ಸರಕಾರದ ಜನಪರ ಕಾರ್ಯಕ್ರಮಗಳೊಂದಿಗೆ ಹಾಗೂ ರಾಜ್ಯದ ಜನತೆ ಸಾಮಾಜಿಕ ನ್ಯಾಯ ಶಾಂತಿ ಸೌಹಾರ್ದತೆ ಸಾಮರಸ್ಯದ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗಿರುತ್ತದೆ. ಕಾಂಗ್ರೆಸ್ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದ್ದು
ನಾವೆಲ್ಲರೂ ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವ ಬಗ್ಗೆ ತೀರ್ಮಾನವನ್ನು ಕೈಗೊಂಡಿರುತ್ತೇವೆ ಎಂದು ಅವರು ಹೇಳಿದರು.
ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಗರ ಪಂಚಾಯತಿ ಸದಸ್ಯ ಕೆ ಎಸ್ ಉಮ್ಮರ್ ರವರು ಮಾತನಾಡಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುವ ದಿನದಂದು ನಾನು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇನೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಸುಳ್ಯ ಬ್ಲಾಕ್ ಉಪಾಧ್ಯಕ್ಷ ಹಾಜಿ ಉಮ್ಮರ್ ಗೂನಡ್ಕ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮುಖಂಡರುಗಳಾದ ಕೆ ಎ ಉಮ್ಮರ್ ಫಾರೂಕ್ ಕಳಂಜ, ಎನ್ ಇಸ್ಮಾಯಿಲ್ ಕಳಂಜ, ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಎ.ಬಿ. ಮೋಹಿದೀನ್, ಉಪಾಧ್ಯಕ್ಷ ಇಬ್ರಾಹಿಂ ಕೊಳಂಬೆ, ಕಾರ್ಯದರ್ಶಿ ಖಾದರ್ ಮೊಟ್ಟೆಂಗರ್, ಮುಖಂಡರಾದ ಇಬ್ರಾಹಿಂ ಹಾಜಿ ಕತ್ತರ್ ಮಂಡೆಕೋಲು, ಕೆಎಂ ಮಹಮ್ಮದ್ ಹಾಜಿ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.