ಕೋಲ್ಕತಾ: ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಅರ್ಧ ಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಗೆಲ್ಲಲು 150 ರನ್ ಗುರಿ ಪಡೆದಿದ್ದ ರಾಜಸ್ಥಾನ ತಂಡ 13.1 ಓವರ್ಗಳಲ್ಲಿ
1 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಜೈಸ್ವಾಲ್ 47 ಎಸೆತಗಳಲ್ಲಿ 13 ಬೌಂಡರಿ, 5 ಸಿಕ್ಸರ್ ನೆರವಿನಿಂದ
ಔಟಾಗದೆ 98 ರನ್ ಸಿಡಿಸಿ ಗಲುವಿನ ರುವಾರಿ ಎನಿಸಿದರು.
ನಾಯಕ ಸಂಜು ಸ್ಯಾಮ್ಸನ್ 29 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ನೆರವಿನಿಂದ ಔಟಾಗದೆ 48 ರನ್ ಗಳಿಸಿದರು. ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರು 121 ರನ್ ಸೇರಿಸಿ ತಂಡಕ್ಕೆ ಗೆಲುವು ತಂದರು. ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಗೆಲುವಿನ ಬೌಂಡರಿ ಗಳಿಸಿದ ಜೈಸ್ವಾಲ್ ಕೇವಲ 2 ರನ್ನಿಂದ ಶತಕ ವಂಚಿತರಾದರು.
ಬೌಂಡರಿ, ಸಿಕ್ಸರ್ಗಳ ಸುರಿಮಳೆ ಗೈದ ಜೈಸ್ವಾಲ್ ಇನ್ನೀಂಗ್ಸ್ನ ಮೊದಲ ಓವರ್ನಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 26 ರನ್ ಗಳಿಸಿದರು. ಕೇವಲ 13 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ಗಳ ಸಹಾಯದಿಂದ ಅರ್ಧಶತಕ ಪೂರೈಸಿದರು. ಈ ಮೂಲಕ ಐಪಿಎಲ್ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು.
ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಮೊಹಾಲಿಯಲ್ಲಿ 2018ರಲ್ಲಿ ಕೇವಲ 14 ಎಸೆತಗಳಲ್ಲಿ 50 ರನ್ ಗಳಿಸಿದ್ದರು. ಪ್ಯಾಟ್ ಕಮಿನ್ಸ್ ಕೆಕೆಆರ್ ಪರವಾಗಿ 2022ರಲ್ಲಿ ಪುಣೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 14 ಎಸೆತಗಳಲ್ಲಿ 50 ರನ್ ಗಳಿಸಿದ್ದರು.
ಈ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೆಕೆಆರ್ ಅಗ್ರ ಸರದಿಯ ಬ್ಯಾಟರ್ ವೆಂಕಟೇಶ್ ಅಯ್ಯರ್(57 ರನ್, 42 ಎಸೆತ, 2 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.ನಾಯಕ ನಿತಿಶ್ ರಾಣಾ(22 ರನ್, 17 ಎಸೆತ), ರಹಮಾನುಲ್ಲಾ ಗುರ್ಬಾಝ್(18 ರನ್, 12 ಎಸೆತ)ಹಾಗೂ ರಿಂಕು ಸಿಂಗ್(16 ರನ್, 18 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ರಾಜಸ್ಥಾನದ ಸ್ಪಿನ್ನರ್ ಯಜುವೇಂದ್ರ ಚಹಾಲ್(4-25)ಯಶಸ್ವಿ ಪ್ರದರ್ಶನದಿಂದ ಗಮನ ಸೆಳೆದರು. ವೇಗದ ಬೌಲರ್ ಟ್ರೆಂಟ್ ಬೌಲ್ಟ್(2-15) ಎರಡು ವಿಕೆಟ್ ಪಡೆದರು.