ಮೊಹಾಲಿ: 27 ಬೌಂಡರಿ,14 ಸಿಕ್ಸರ್..ರನ್ ಸುರಿಮಳೆಗೈದ ಬ್ಯಾಟರ್ಗಳ ಅಬ್ಬರದಿಂದಾಗಿ ಲಖನೌ ಸೂಪರ್ ಜೈಂಟ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಯಲ್ಲಿ ಎರಡನೇ ದೊಡ್ಡ ಮೊತ್ತವನ್ನು ದಾಖಲಿಸಿ, ಪಂಜಾಬ್ ಕಿಂಗ್ಸ್ ತಂಡವನ್ನು 56 ರನ್ಗಳಿಂದ ಮಣಿಸಿತು.
ಸೂಪರ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 257 ರನ್ ಗಳಿಸಿತು. ಹತ್ತು ವರ್ಷದ ಹಿಂದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ವಿಕೆಟ್ಗಳಿಗೆ 263 ರನ್ ಗಳಿಸಿತ್ತು. ಅದರ ನಂತರ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.ತಂಡದ ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ (54; 24ಎ, 4X7, 6X4) ಹಾಗೂ ಮಾರ್ಕಸ್ ಸ್ಟೋಯಿನಿಸ್ (72; 40ಎ, 4X6, 6X5) ಅರ್ಧಶತಕಗಳನ್ನು ಗಳಿಸಿದರು. ಕೊನೆಯ ಹಂತದ ಓವರ್ಗಳಲ್ಲಿ ರನ್ ಹರಿದು ಬರಲು ನಿಕೊಲಸ್ ಪೂರನ್ (45; 19 ಎ, 4X7, 6X1) ಅವರ ಭರ್ಜರಿ ಹೊಡೆತ ಕಾರಣವಾಯಿತು. ಪಂಜಾಬ್ ಕಿಂಗ್ಸ್ ತಂಡ ದಿಟ್ಟವಾಗಿ ಹೋರಾಡಿದರೂ 19.5 ಓವರ್ಗಳಲ್ಲಿ 201 ರನ್ಗಳಿಗೆ ಆಲೌಟಾಯಿತು.
ಅಥರ್ವ ತೈಡೆ (66 ರನ್, 36 ಎ.), ಸಿಕಂದರ್ ರಝಾ (36 ರನ್, 22 ಎ.), ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಜಿತೇಶ್ ಶರ್ಮಾ (24 ರನ್, 10 ಎ.) ಅವರು ಹೋರಾಟ ನಡೆಸಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟಿತು. ಲಖನೌ ಬೌಲರ್ಗಳಲ್ಲಿ ಯಶ್ ಠಾಕೂರ್ (37ಕ್ಕೆ 4) ಮತ್ತು ನವೀನ್ ಉಲ್ ಹಕ್ (30ಕ್ಕೆ 3) ಅವರು ಗಮನ ಸೆಳೆದರು.
ಇದಕ್ಕೂ ಮುನ್ನ ಟಾಸ್ ಗೆದ್ದ ಪಂಜಾಬ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಮೇಯರ್ಸ್ ಹಾಗೂ ಆಯುಷ್ ಬಡೋಣಿ ಸೇರಿ ಬೌಲರ್ಗಳನ್ನು ದಂಡಿಸಿದರು. ಬಳಿಕ ಸ್ಟೋಯಿನಿಸ್ ಮಿಂಚಿನ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ತಂಡದ ಮೊತ್ತವು ಶರವೇಗದಲ್ಲಿ ಮೇಲಕ್ಕೇರಿತು. ಸ್ಟೋಯಿನಿಸ್ ಹಾಗೂ ಆಯುಷ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 89 ರನ್ ಸೇರಿಸಿದರು. ನಿಕೋಲಾಸ್ ಪೂರನ್ ಹಾಗು ಸ್ಟೊಯಿನಿಸ್ ಅಬ್ಬರಿಸಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 28 ಎಸೆತಗಳಲ್ಲಿ 76 ರನ್ಗಳು ಸೇರಿದವು. ಇದರಿಂದಾಗಿ ತಂಡದ ಮೊತ್ತವು 250ರ ಗಡಿ ದಾಟಿತು. ಕೊನೆಯ ಐದೂ ಓವರ್ಗಳಲ್ಲಿ 73 ರನ್ಗಳು ಹರಿದು ಬಂದವು