ಅಹ್ಮದಾಬಾದ್: ಭಾರತ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ಕುಸಿದ ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತಕ್ಕೆ ಸಾಧಾರಣ ಗುರಿ ನೀಡಿದೆ. ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಮುಂದೆ ನಡೆಯುತ್ತಿರುವ ಪಂದ್ಯದಲ್ಲಿ ಭಾರತಕ್ಕೆ 192 ರನ್ ಗೆಲುವಿನ ಗುರಿ ನೀಡಿದೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ತಂಡ 42.5 ಓವರ್ಗಳಲ್ಲಿ
191 ರನ್ಗೆ ಆಲ್ ಔಟಾಯಿತು.ಜವಾಬ್ದಾರಿಯುತ ಆಟವಾಡಿದ ಪಾಕ್ ನಾಯಕ ಬಾಬರ್ ಅಝಮ್ ಹಾಗೂ ಮುಹಮ್ಮದ್ ರಿಝ್ವಾನ್ ಉತ್ತಮ ಅಡಿಪಾಯ ಹಾಕಿದರೂ ಇವರಿಬ್ಬರೂ ಔಟಾದ ಬಳಿಕ ಪಾಕಿಸ್ತಾನದ ಬ್ಯಾಟಿಂಗ್ ಕುಸಿಯಿತು. 2 ವಿಕೆಟ್ಗೆ 155 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದ್ದ ಪಾಕಿಸ್ತಾನ ಬಳಿಕ ತರಗಲೆಗಳಂತೆ ಕುಸಿಯಿತು.
ಬಾಬರ್ ಅಝಮ್ 50 ರನ್ ಗಳಿಸಿದರೆ, ಮುಹಮ್ಮದ್ ರಿಝ್ವಾನ್ 49 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಆರಂಭಿಕ ಅಬ್ದುಲ್ ಶಕೀಲ್ 20 ರನ್,ಇಮಾಮ್ ಉಲ್ ಹಖ್ 36 ರನ್ ಗಳಿಸಿದರೆ ಸೌದ್ ಶಕೀಲ್ 6, ಇಫ್ತಿಕಾರ್ ಅಹ್ಮದ್ 4, ಶಾದಾಬ್ ಖಾನ್ 2, ಮೊಹಮ್ಮದ್ ನವಾಝ್ 4, ಹಸನ್ ಅಲಿ 12, ಹ್ಯಾರೀಸ್ ರೌಫ್ 2, ಶಹೀನ್ ಅಫ್ರಿದಿ 2 ರನ್ ಗಳಿಸಿ ಬಹು ಬೇಗನೇ ಪೆವಿಲಿಯನ್ ಸೇರಿದರು.
ಭಾರತ ತಂಡದ ಬೌಲರ್ಗಳ ಉತ್ತಮ ದಾಳಿಗೆ ಸಿಲುಕಿದ ಪಾಕ್ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ಮೊದಲು ವೇಗದ ಬೌಲಿಂಗ್ ಎದುರಿಸಿದ್ದ ಪಾಕ್, ಬಳಿಕ ಭಾರತದ ವೇಗ ಹಾಗೂ ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿತು. ಪಾಕಿಸ್ತಾನದ ಉತ್ತಮ ರನ್ ಪೇರಿಸುವ ಪ್ರಯತ್ನಕ್ಕೆ ಭಾರತೀಯ ಬೌಲರ್ಗಳು ಕರಾರುವಾಕ್ ಬೌಲಿಂಗ್ ನಡೆಸಿ ಕಡಿವಾಣ ಹಾಕಿದರು.
ಜಸ್ಪ್ರೀತ್ ಬೂಮ್ರಾ, ಕುಲ್ ದೀಪ್ ಯಾದವ್,ಮುಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ತಲಾ 2 ವಿಕೆಟ್ ಪಡೆದು ಮಿಂಚಿದರು.