ಸುಳ್ಯ:ಸುಳ್ಯ ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಹಳೆಗೇಟು-ಜಯನಗರ ಸಂಪರ್ಕ ರಸ್ತೆಯಲ್ಲಿ ಕೃತಕ ಕೆರೆ ನಿರ್ಮಾಣವಾಗಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ ಹಳೆಗೇಟಿನಿಂದ ಜಯನಗರ, ಕೊಡಿಯಾಲಬೈಲು ಸಂಪರ್ಕ ಕಲ್ಪಿಸುವ ಬಹು ಉಪಯೋಗಿ ರಸ್ತೆಯಲ್ಲಿ ಹೊಸಗದ್ದೆ ಬಳಿ ಈ ಆವಾಂತದರ ಉಂಟಾಗಿದೆ.ಕಳೆದ ಬೇಸಿಗೆಯಲ್ಲಿ ಮಾಡಿದ ಡಾಮರೀಕರಣ
ಮೊದಲ ಮಳೆ ಬೀಳುತ್ತಿದ್ದಂತೆ ಢಮಾರ್ ಆಗಿದ್ದು, ಡಾಮರೀಕರಣ ಮಾಡಿ ಸುಂದರವಾಗಿದ್ದ ರಸ್ತೆ ಒಂದು ತಿಂಗಳಲ್ಲಿ ಎಕ್ಕುಟ್ಟಿ ಹೋಗಿದ್ದು ಭಾರೀ ಗಾತ್ರದ ಹೊಂಡ ಗುಂಡಿ ನಿರ್ಮಾಣ ಆಗಿದೆ. ಮಳೆ ಬೀಳುತ್ತಿದ್ದಂತೆ ರಸ್ತೆಯಲ್ಲಿ ಕೆಸರು ನೀರು ತುಂಬಿದೆ. ವಾಹನಗಳು ಓಡಾಡುವಾಗ ದೊಡ್ಡ ಹೊಂಡಕ್ಕೆ ಬೀಳುತಿದೆ. ಇದರಿಂದ ವಾಹನಗಳಿಗೆ ಜಖಂ ಆಗಿ ಬಿಡಿ ಭಾಗಗಳು ಕಳಚಿ ಬೀಳುತಿದೆ.ಅಲ್ಲದೆ ಇಲ್ಲಿ ಅಪಘಾತಗಳೂ ಉಂಟಾಗುತಿದೆ. ಕಳೆದ ಎರಡು ವಾರಗಳಿಂದ ಈ ಹೊಂಡ ಮೃತ್ಯುಕೂಪವಾಗಿ ಬಾಯ್ದೆರೆದು ನಿಂತಿದೆ. ವಾಹನ ಸವಾರರು ಹೇಗೆ ಹೋಗುವುದು ಎಲ್ಲಿ ಹೋಗುವುದು ಎಂದು ಪರದಾಡುವ ಸ್ಥಿತಿ ನಿರ್ಮಾಣ ಅಗಿದೆ.
ಡಾಮರು ತಿಂಗಳಲ್ಲಿ ಡಮಾರ್:
ಈ ರಸ್ತೆಯಲ್ಲಿ ಮಾಡಿದ ಡಾಮರ್ ಕೇವಲ ಒಂದು ತಿಂಗಳಲ್ಲಿ ಎಕ್ಕುಟ್ಟಿ ಹೋಗಿ ಈ ನರಕ ಸಮಾನ ಸ್ಥಿತಿ ಆಗಿದೆ.
ಹಳೆಗೇಟಿನಿಂದ ಹೊಸ ಗದ್ದೆ ಕಟ್ಟೆ ಸಮೀಪದದವರೆಗೆ ರಸ್ತೆ ಕಾಂಕ್ರೀಟೀಕರಣ ಗೊಂಡಿದೆ. ಕಾಂಕ್ರಿಟೀಕರಣದ ಬಳಿಕ ಡಾಮರು ರಸ್ತೆ ಆರಂಭಗೊಳ್ಳುವ ಸ್ಥಳದಲ್ಲಿ ಡಾಮರೀಕರಣ ಒಂದು ತಿಂಗಳಲ್ಲಿ ಎಕ್ಕುಟ್ಟಿ ಹೋಗಿದ್ದು ದೊಡ್ಡ ಹೊಂಡ ಉಂಟಾಗಿ ಕೆಸರು ನೀರು ತುಂಬಿ ಪ್ರಯಾಣಕ್ಕೆ ಸಂಚಕಾರ ತಂದಿದೆ. ಹಳೆಗೇಟಿನಿಂದ ಬರುವ ರಸ್ತೆ ಹೊಸಗದ್ದೆ ಕಟ್ಟೆ ಬಳಿಯಿಂದ ಒಂದು ರಸ್ತೆ ಜಯನಗರ ಕಡೆಗೆ, ಇನ್ನೊಂದು
ಕೊಡಿಯಾಲಬೈಲು ಕಡೆಗೆ ಹೋಗುತ್ತದೆ. ದಿನಾಲು ನೂರಾರು ವಾಹನಗಳು ಓಡಾಡುವ, ಸಾವಿರಾರು ಜನರು ಪ್ರಯಾಣಿಸುವ ಬಹು ಉಪಯೋಗಿ ರಸ್ತೆ. ಈ ರಸ್ತೆಯಲ್ಲಿ ಕಟ್ಟೆ ಬಳಿ ಹೊಂಡ ಗುಂಡಿ ಮಾಮೂಲಿಯಾಗಿತ್ತು. ಜನರ ವರ್ಷದ ಬೇಡಿಕೆಯ ಬಳಿಕ ಕಳೆದ ತಿಂಗಳು ಇಲ್ಲಿ ಡಾಮರೀಕರಣ ನಡೆದಿತ್ತು. ಆದರೆ ಜನರ ಪ್ರಯಾಣದ ನಿರೀಕ್ಷೆಗೆ ತಣ್ಣೀರೆರೆಚಿ ಮಳೆ ಬೀಳುತ್ತಿದ್ದಂತೆ ಡಾಮರೀಕರಣದ ಹೊಸತನ ಮಾಸುವ ಮುನ್ನವೇ ಡಾಮರು ಸಂಪೂರ್ಣ ಎದ್ದು ಹೋಗಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದೆ. ಕೇವಲ ಒಂದು ತಿಂಗಳಲ್ಲಿ, ಮಳೆಯ ಹನಿ ಬೀಳುತ್ತಿದ್ದಂತೆ ರಸ್ತೆ ಢಮಾರ್ ಆಗಿ ಡಾಮರು ಮಾಯವಾಗಿ ಹೊಂಡ ನಿರ್ಮಾಣ ಆಗಿರುವುದರಿಂದ ಜನರು ಹಿಡಿ ಶಾಪ ಹಾಕುವಂತಾಗಿದೆ.