ಅಹಮದಾಬಾದ್: ಹಾಲಿ ರನ್ನರ್ಸ್ ಅಪ್ ತಂಡ ಗುಜರಾತ್ ಟೈಟನ್ಸ್ ಈ ಬಾರಿ ಪ್ಲೇ ಆಫ್ ಪ್ರವೇಶದ ಹಾದಿಯಿಂದ ಹೊರಬಿತ್ತು.
ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಕೋಲ್ಕತ್ತ ನೈಟ್ ರೈಡರ್ಸ್ ಎದುರಿನ ಪಂದ್ಯವು ರದ್ದಾದ ನಂತರ ಟೈಟನ್ಸ್ ಪ್ಲೇಆಫ್ ಕನಸು ಕಮರಿತು. ಒಟ್ಟು 11 ಅಂಕ ಗಳಿಸಿದ ಶುಭಮನ್ ಗಿಲ್ ತಂಡವು ಸದ್ಯ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 13 ಪಂದ್ಯಗಳನ್ನು ಆಡಿ
5 ಪಂದ್ಯ ಗೆದ್ದು 7ರಲ್ಲಿ ಸೋತಿದೆ. ಮೇ 16ರಂದು ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿರುವ ಗಿಲ್ ಬಳಗವು ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಸೆಣಸಲಿದೆ. ನಾಲ್ಕು ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ಅಮೋಘ ಜಯ ಸಾಧಿಸಿದ್ದ ಟೈಟನ್ಸ್ ತಂಡಕ್ಕೆ ನಾಲ್ಕರ ಘಟ್ಟ ಪ್ರವೇಶಿಸುವ ಸಣ್ಣ ಅವಕಾಶವೊಂದು ಇತ್ತು. ಕೋಲ್ಕತ್ತ ಮತ್ತು ಸನ್ರೈಸರ್ಸ್ ಎದುರಿನ ಪಂದ್ಯಗಳಲ್ಲಿ ಗೆದ್ದು ಒಟ್ಟು 14 ಅಂಕ ಗಳಿಸಿ ಪ್ಲೇ ಆಫ್ ಪೈಪೋಟಿಯಲ್ಲಿ ಉಳಿಯುವ ಭರವಸೆಯಲ್ಲಿತ್ತು.
ಆದರೆ ಸೋಮವಾರ ಸಂಜೆ ಸುರಿಯಲು ಆರಂಭಿಸಿದ ಮಳೆಯಲ್ಲಿ ಗಿಲ್ ಬಳಗದ ಕನಸು ಕೊಚ್ಚಿಹೋಯಿತು. ಆಗಾಗ ತುಸು ಬಿಡುವು ಕೊಟ್ಟ ಮಳೆಯಿಂದಾಗಿ ಪಂದ್ಯ ಪುನರಾರಂಭವಾಗುವ ಭರವಸೆ ಮೂಡುತ್ತಿತ್ತು. ಆದರೆ ಮತ್ತೆ ಮಳೆ ಬರುತ್ತಿತ್ತು. ಕೊನೆಗೆ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಕೋಲ್ಕತ್ತ ತಂಡವು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.ಟೈಟನ್ಸ್ ತಂಡಕ್ಕೆ ತವರಿನಂಗಳದಲ್ಲಿ ಇದು ಕೊನೆಯ ಪಂದ್ಯವಾಗಿತ್ತು. ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು ನಿರಾಶೆಯಿಂದ ಮರಳಿದರು.
ಗುಜರಾತ್ ತಂಡವು 2022 ಮತ್ತು 2023ರ ಆವೃತ್ತಿಗಳಲ್ಲಿ ಕ್ರಮವಾಗಿ ಚಾಂಪಿಯನ್ ಮತ್ತು ರನ್ನರ್ಸ್ ಅಪ್ ಆಗಿತ್ತು. ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಪ್ಲೇಆಪ್ ಹಾದಿಯಿಂದ ಹೊರ ಬಿದ್ದಿದೆ.