ಸುಳ್ಯ:ಮೌಲ್ಯಯುತ ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು. ಸತತ ಉತ್ತಮ ಫಲಿತಾಂಶ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವ್ಯವಸ್ಥೆ. ಕಳೆದ ಒಂದೂವರೆ ದಶಕಗಳಿಂದ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು ಗ್ರಾಮೀಣ ಭಾಗದಲ್ಲಿ ಅಕ್ಷರಷಃ ಶಿಕ್ಷಣ ಕ್ರಾಂತಿ ಮಾಡುತಿದೆ. ಶಿಕ್ಷಣ ಕಾಶಿ ಎಂದೇ ಪ್ರಪಂಚದ ಭೂಪಟದಲ್ಲಿ ಗುರುತಿಸಿ ಕೊಂಡಿರುವ ಸುಳ್ಯದಲ್ಲಿ ಮೌಲ್ಯಯುತ ಶಿಕ್ಷಣ ಧಾರೆಯೆರೆದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದೆ.
ಗ್ರಾಮೀಣ ಪರಿಸರದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕಣಿಕ ಬೆಳವಣಿಗೆಗೆ ಪೂರಕವಾಗಿ ವಾತಾವರಣವನ್ನು ರೂಪಿಸಿ ಸಮಾಜದ ಪ್ರತಿಯೊಬ್ಬರಿಗೂ ಪದವಿ ಶಿಕ್ಷಣದ
ಅವಕಾಶವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಶಾಸಕರಾದ ಎಸ್.ಅಂಗಾರ ಹಾಗೂ ವಿದ್ಯಾಭಿಮಾನಿಗಳ ಕೋರಿಕೆಯ ಮೇರೆಗೆ ಕರ್ನಾಟಕ ಸರಕಾರದ ಆದೇಶದಂತೆ ೨೦೦೭-೦೮ನೇ ಶೈಕಣಿಕ ವರ್ಷದಲ್ಲಿ ಸುಳ್ಯ ತಾಲೂಕಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭವಾಯಿತು. ಪ್ರಾರಂಭದಲ್ಲಿ ಸ್ವಂತ ಜಾಗವಿಲ್ಲದೆ ಸುಳ್ಯನಗರದ ಜ್ಯೋತಿ ವೃತ್ತದ ಬಳಿ ಇರುವ ಅಮೃತಭವನ ಕಟ್ಟಡದಲ್ಲಿ ಕರ್ಯನಿರ್ವಹಿಸುತ್ತಿದ್ದ ಕಾಲೇಜು ಬಳಿಕ ನಗರದ ಜಟ್ಟಿಪಳ್ಳ ರಸ್ತೆಯಿಂದ ಸುಮಾರು ೨ಕಿ ಮೀ ದೂರದ ಕೊಡಿಯಾಲಬೈಲಿನಲ್ಲಿ ನಿರ್ಮಾಣಗೊಂಡ ಕಾಲೇಜಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಹೊಸ ಪಯಣ ಆರಂಭಿಸಿತು.
ಸುಳ್ಯ ತಾಲೂಕಿನ ಗ್ರಾಮೀಣ ಪರಿಸರದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವರದಾನವಾಗಿ ಸಿಕ್ಕ ಈ ಕಾಲೇಜು ಸುಳ್ಯ ಮಾತ್ರವಲ್ಲದೆ ಹಾಸನ, ಕೊಡಗು, ಹಾಗೂ ನೆರೆಯ ಕೇರಳ ಗಡಿಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಯ ಪ್ರಮುಖ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.
ಬಿ.ಕಾಂ, ಬಿ.ಬಿ.ಎ, ಬಿ.ಎ ಹಾಗೂ ಬಿ.ಎಸ್ಸಿ ಪದವಿ ಶಿಕ್ಷಣಗಳನ್ನು ಕಾಲೇಜು ನೀಡುತ್ತಿದ್ದು, ಯುಜಿಸಿ ಯಿಂದ ೨ಎಫ್ ೧೨ಬಿ ಮಾನ್ಯತೆ ಪಡೆದಿದ್ದು, ಮಂಗಳೂರು ವಿಶ್ವವಿದ್ಯಾನಿಲಯದ ಶಾಶ್ವತ ಸಂಯೋಜನೆಗೊಳಪಟ್ಟಿದೆ. ಪ್ರಸ್ತುತ ವರ್ಷದಿಂದ ಬಿ.ಸಿ.ಎ ಕೋರ್ಸ್ ಪ್ರಾರಂಭಿಸಲು ಸರಕಾರದ ಅನುಮೋದನೆಗೆ ಪತ್ರ ಬರೆದಿದ್ದು, ಅನುಮತಿ ಸಿಕ್ಕಿದಲ್ಲಿ ಈ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್ ಪ್ರಾರಂಭಿಸಲು ಬಧ್ದವಾಗಿದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ಕುಮಾರ್ ಕೆ.ಆರ್. ಉತ್ತಮ ಶೈಕ್ಷಣಿಕ ಸಾಧನೆಯ ಜೊತೆಗೆ ಪಠ್ಯದ ಜೊತೆಗೆ ಎನ್ ಎಸ್ ಎಸ್, ರೆಡ್ ಕ್ರಾಸ್, ರೋವರ್ ರೇಂಜರ್ಸ್, ಸಾಂಸ್ಕೃತಿಕ ಹಾಗೂ ಕ್ರೀಡೆ ಮೊದಲಾದ ಪಠ್ಯೇತರ ಚಟುವಟಿಕೆಗಳು ಕೂಡ ಕಾಲೇಜಿನಲ್ಲಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿವಿಧ ಪಂದ್ಯಾವಳಿಗಳನ್ನು ಸತತ ೮ ವರ್ಷಗಳಿಂದ ಆಯೋಜಿಸುತ್ತಾ ಬಂದಿದ್ದು, ಸರಕಾರಿ ಕಾಲೇಜುಗಳ ಪೈಕಿ ವಿಶಿಷ್ಟ ಸಾಧನೆ ಮಾಡಿದೆ.
೨೦೧೫-೧೬ನೇ ಶೈಕ್ಷಣಿಕ ಸಾಲಿನಲ್ಲಿ ಯು.ಜಿ.ಸಿಯ ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟು ಪ್ರಥಮ ಪ್ರಯತ್ನದಲ್ಲೇ “ಬಿ” ಗ್ರೇಡ್ ಮಾನ್ಯತೆ ಪಡೆದದ್ದು ಕಾಲೇಜಿನ ಹಿರಿಮೆಗಳಲ್ಲಿ ಒಂದು. ಪ್ರಸಕ್ತ ಶೈಕ್ಷಣಿಕ ವರ್ಷ ೨೦೨೨-೨೩ರಲ್ಲಿ ಎರಡನೆಯ ಬಾರಿಗೆ ನ್ಯಾಕ್ ಪ್ರಕ್ರಿಯೆಗೆ ಒಳಪಟ್ಟು ಕಾಲೇಜು “ಬಿ+” ಮಾನ್ಯತೆಯನ್ನು ಪಡೆದು ಮಹತ್ತರ ಸಾಧನೆಗೈದಿದ್ದು ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
೨೦೧೬ರ ನಂತರ ಪೂರ್ಣ ಸಂಖ್ಯೆಯ ಖಾಯಾಂ ಉಪನ್ಯಾಸಕರುಗಳು ಕಾರ್ಯ ನಿರ್ವಹಿಸುತ್ತಿದ್ದು ಕಾಲೇಜು ೨೦೧೭ರ ನಂತರ ಬಹುತೇಕ ಎಲ್ಲಾ ವಿಷಯಗಳಿಗೆ ಖಾಯಂ ಉಪನ್ಯಾಸಕರನ್ನು ಹೊಂದಿದ್ದು, ಪ್ರಸ್ತುತ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ರವರ ನೇತೃತ್ವದಲ್ಲಿ ಒಟ್ಟು ೧೫ ಖಾಯಾಂ ಉಪನ್ಯಾಸಕರು, ೧೪ ಅತಿಥಿ ಉಪನ್ಯಾಸಕರು ಮತ್ತು ೫ ಮಂದಿ ಕಚೇರಿ ಸಿಬ್ಬಂಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಸರಕಾರದಿಂದ ದೊರಕಿದ ವಿಶೇಷ ಅನುದಾನದಲ್ಲಿ ತಂತ್ರಜ್ಞಾನ ಆಧಾರಿತ ಸುಸಜ್ಜಿತ ತರಗತಿಗಳ ನಿರ್ಮಾಣವಾಗಿದ್ದು, ಸುಮಾರು ೮ ತರಗತಿ ಕೊಠಡಿಗಳಲ್ಲಿ ಪ್ರಾಜೆಕ್ಟರ್ ಹಾಗೂ ವೈಫೈ ಸೌಲಭ್ಯವಿದೆ. ಶಾಸಕರ ವಿಶೇಷ ಅನುದಾನದಲ್ಲಿ ಸುಮಾರು ೧೦ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಹವಾನಿಯಂತ್ರಿತ ಗಣಕಯಂತ್ರ ಪ್ರಯೋಗಾಲಯವು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಕಾಲೇಜು ಹಲವು ಬಗೆಯ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಪ್ರಮುಖವಾಗಿ ನುರಿತ ಪ್ರಾಧ್ಯಾಪಕ ವರ್ಗ, ಶಿಸ್ತುಬದ್ದ ಶೈಕ್ಷಣಿಕ ವಾತಾವರಣ ಸುಸಜ್ಜಿತ ಗ್ರಂಥಾಲಯ ಹಾಗೂ ಸಭಾಂಗಣ ವಿಶಾಲ ಆಟದ ಮೈದಾನ ಸುಸಜ್ಜಿತ ಮಲ್ಟಿ ಜಿಮ್, ಪಠ್ಯೇತರ ಚಟುವಟಿಕೆಗಳಿಗೆ ಉತ್ತಮ ಅವಕಾಶ ಹೀಗೆ ಕಲಿಕೆಗೆ ಪೂರಕವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಾಲೇಜು ಹೊಂದಿದ್ದು, ವಿದ್ಯಾರ್ಜನೆಯ ಮೌಲ್ಯವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.
ಸರಕಾರದ ವತಿಯಿಂದ ಹೆಣ್ಣು ಮಕ್ಕಳಿಗಾಗಿ ಶುಲ್ಕಮರುಪಾವತಿ ಸೌಲಭ್ಯ, ಹುಡುಗರಿಗೆ ಕನಿಷ್ಟ ಮೊತ್ತದ ಶುಲ್ಕ, ಹಲವು ಬಗೆಯ ವಿದ್ಯಾರ್ಥಿವೇತನದ ಅವಕಾಶಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ ವಾಹನ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾಲೇಜಿನ ಮುಂಬಾಗ ಹಾಕಿರುವ ಇಂಟರ್ ಲಾಕ್ ವ್ಯವಸ್ಥೆ ಕಾಲೇಜಿನ ಮೆರುಗನ್ನು ಇನ್ನಷ್ಟು ಹೆಚ್ಚಿಸಿ ಶೈಕಣಿಕ ವಾತಾವರಣ ಕಳೆಗಟ್ಟುವಂತೆ ಮಾಡಿದೆ. ಕಾಲೇಜಿನ ಸಮೀಪವಿರುವ ಕ್ಯಾಂಟೀನ್ ನಲ್ಲಿ ವಿದ್ಯಾರ್ಥಿಗಳಿಗೆ ಮಿತದರದಲ್ಲಿ ಊಟ ತಿಂಡಿಗಳು ದೊರಕುತ್ತಿದ್ದು, ಉತ್ತಮ ಸೇವೆಯನ್ನು ನೀಡುತ್ತಾ ಕಾಲೇಜಿನ ವಾತಾವರಣಕ್ಕೆ ಪೂರಕವಾಗಿ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ನಿಸರ್ಗದ ಪ್ರಶಾಂತ ಪರಿಸರದ ಮಡಿಲಲ್ಲಿ ಕಂಗೊಳಿಸುತ್ತಿರುವ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಸರಕಾರಿ ಉದ್ಯೋಗ, ಸೇನೆ, ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಉದ್ಯೋಗವನ್ನು ಮಾಡುತ್ತ ಕಾಲೇಜಿಗೂ ಊರಿಗೂ ಉತ್ತಮ ಹೆಸರನ್ನು ತಂದುಕೊಟ್ಟಿರುತ್ತಾರೆ. ಇದೀಗ ಹೊಸ ಶಿಕ್ಷಣ ನೀತಿಯ ವ್ಯವಸ್ಥೆಯೊಂದಿಗೆ ಕಾಲೇಜು ಮುನ್ನಡೆಯುತ್ತಿದ್ದು, ಸುಳ್ಯದ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯುವುದರ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುತ್ತ ಈ ಮೂಲಕ ಜಿಲ್ಲೆ ಹಾಗೂ ರಾಜ್ಯದಲ್ಲಿಯೇ ಮಾದರಿ ಕಾಲೇಜಾಗಿ ಹೆಸರು ಪಡೆಯಬೇಕು ಎಂಬುದು ನಮ್ಮ ಆಶಯ ಎನ್ನುತ್ತಾರೆ ಪ್ರಾಂಶುಪಾಲ ಸತೀಶ್ ಕುಮಾರ್.