ಸುಳ್ಯ: ಶಿಕ್ಷಣ ಮೊಟಕಗೊಂಡು ಬರೋಬರಿ 23 ವರ್ಷದ ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ವಿದ್ಯೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಭಟ್. 421 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅದ್ವಿತೀಯ ಸಾಧನೆ ಮಾಡಿರುವ ಭಾರತಿ ಭಟ್ ಮೂಲತಃ ಸುಳ್ಯ ತಾಲೂಕಿನವರು. ಆಲೆಟ್ಟಿ ಗ್ರಾಮದ ಬಡ್ಡಡ್ಕ ಸಮೀಪದ
ಪತ್ತುಕುಂಜದ ರಾಮಚಂದ್ರ ನಾಯಕ್ ಮತ್ತು ರಮಾ ನಾಯಕ್ ದಂಪತಿಗಳ ಪುತ್ರಿ. ಕಾಸರಗೋಡಿನ ಬದಿಯಡ್ಕ ಚಾಂಗುಳಿ ಮನೆತನದ ವೆಂಕಟ್ರಮಣ ಭಟ್ ಅವರ ಪತ್ನಿಯಾದ ಭಾರತಿ ಅವರು ಈಗ ಪತಿ, ಮಕ್ಕಳಾದ ಆದಿತಿ(8ನೇ ತರಗತಿ), ಅನಘಾ(6ನೇ ತರಗತಿ) ಅವರೊಂದಿಗೆ ಪಾಣಾಜೆಯಲ್ಲಿ ನೆಲೆಸಿದ್ದಾರೆ. ಪಾಣಾಜೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯೆಯಾಗಿರುವ ಅವರು ಎರಡು ವರ್ಷಗಳಿಂದ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಲ್ಲಿ ಕಾಡಿದ್ದ ಬಡತನದಿಂದ ಮೊಟಕುಗೊಂಡಿದ್ದ ಶಿಕ್ಷಣವನ್ನು ಮತ್ತೆ ಮುಂದುವರಿಸಿರುವ ಅವರು ಎರಡೇ ವರ್ಷದಲ್ಲಿ ಎಸ್ಎಸ್ಎಲ್ಸಿ ಹಾಗು ಪಿಯುಸಿ ಪರೀಕ್ಷೆ ಉತ್ತೀರ್ಣರಾಗಿ ಅನನ್ಯ ಸಾಧನೆ ಮಾಡಿದ್ದಾರೆ
ಭಾರತಿ ಭಟ್.
ಬಡ ಕುಟುಂಬದಲ್ಲಿ ಜನಿಸಿದ್ದ ಭಾರತಿ ಪ್ರಾಥಮಿಕ ವಿದ್ಯಾಭ್ಯಾಸ ಆಲೆಟ್ಟಿ ಗ್ರಾಮದ ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿ1996-97 ರ ಏಳನೇ ತರಗತಿಯ ಬೋರ್ಡ್ ಎಕ್ಸಾಂ ನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ 1997-98 ರಲ್ಲಿ ಎಂಟನೇ ತರಗತಿ ತೇರ್ಗಡೆ ಹೊಂದಿದರು.ಬಳಿಕ ತಂದೆಯ ವಿಯೋಗದಿಂದಾಗಿ ವಿದ್ಯಾಭ್ಯಾಸ ಕೈಬಿಡಬೇಕಾಯಿತು.ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ. ಕುಟುಂಬದ ಬೆನ್ನೆಲುಬಾಗಿ ನಿಂತು ಸುಮಾರು ಹನ್ನೆರಡು ವರ್ಷಗಳ ಕಾಲ ಕೂಲಿ ಕೆಲಸ ಮಾಡಿದರು. ಬಳಿಕ ವೆಂಕಟ್ರಮಣ ಭಟ್ ಅವರ ಜೊತೆ ವಿವಾಹವಾದರು.
ಆದರೂ ಬಾಲ್ಯದಲ್ಲಿ ಅರ್ಧದಲ್ಲಿ ಮೊಟಕುಗೊಂಡ ವಿದ್ಯಾಭ್ಯಾಸವನ್ನು ಮುಂದುವರಿಸುವ ತುಡಿತ ಇವರಲ್ಲಿತ್ತು.ಈ ಹಿನ್ನಲೆಯಲ್ಲಿ ಕೊಯ್ಯೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿರುವ ಬಾಲಕೃಷ್ಣ ಬೇರಿಕೆಯವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದೊಂದಿಗೆ ಕಳೆದ ವರ್ಷ 2021-22 ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯ ಕೋಟ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಎದುರಿಸಿ 54% ಅಂಕಗಳನ್ನು ಪಡೆದು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾದರು. ಇದೀಗ ಈ ಸಲ 2022-23 ನೇ ಸಾಲಿನ ಪಿಯುಸಿ ಪರೀಕ್ಷೆಗೆ ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಸಗಿಯಾಗಿ ಅಡ್ಮಿಷನ್ ಪಡೆದು ಪರೀಕ್ಷೆಯನ್ನೆದುರಿಸಿ 421 ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪಂಚಾಯತ್ ಕೆಲಸ ಹಾಗೂ ಮನೆಯ ನಿರ್ವಹಣೆ ಜೊತೆಗೆ, ರಾಜಕೀಯ ಕ್ಷೇತ್ರದ ಕೆಲಸ, ಸಮಾಜ ಸೇವೆಯ ಜೊತೆಗೆ ಕವಯಿತ್ರಿಯೂ ಆಗಿರುವ ಇವರು ತಮ್ಮ ಸಾಹಿತ್ಯ ಕೃಷಿಯ ಮಧ್ಯೆ ಸಿಗುವ ಅಲ್ಪ ಸಮಯದಲ್ಲಿ ಓದಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ತನ್ನ ಮನೆಯವರು, ಮಿತ್ರರು, ಸಂಬಂಧಿಕರು ಪ್ತೋತ್ಸಾಹ, ಸಹಕಾರ ನೀಡಿದ್ದಾರೆ. ಮುಂದೆ ಶಿಕ್ಷಣ ಮುಂದುವರಿಸಿ ಪದವಿ ಪಡೆಯಬೇಕು ಎಂಬ ಕನಸಿದೆ ಎನ್ನುತ್ತಾರೆ ಭಾರತಿ ಭಟ್.