ಬೆಂಗಳೂರು: ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 12 ಮಂದಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆಯಲ್ಲಿ ನಡೆದಿದೆ.
ಘಟನೆ ನಡೆದ ವೇಳೆ 30-40 ಕಾರ್ಮಿಕರು ಸ್ಥಳದಲ್ಲಿ ಇದ್ದರು ಎಂದು ತಿಳಿದು ಬಂದಿದೆ. ಈ ಪೈಕಿ 12 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು
ವರದಿಯಾಗಿದೆ. ತಮಿಳುನಾಡಿನಿಂದ ಬಂದ ಪಟಾಕಿಯನ್ನು ಲಾರಿಯಿಂದ ಇಳಿಸಿ ಗೋದಾಮಿನಲ್ಲಿ ಇರಿಸುವ ವೇಳೆ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಮಳಿಗೆಯಲ್ಲಿ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ಪಟಾಕಿಗಳನ್ನು ಶೇಖರಿಸಲಾಗಿತ್ತು ಎಂದು ತಿಳಿದು ಬಂದಿದೆ. ಅಗ್ನಿ ಅವಘಡಕ್ಕೆ ಸಹ ನಿಖರ ಕಾರಣ ತಿಳಿದು ಬಂದಿಲ್ಲ.
ಪಟಾಕಿ ಗೋದಾಮಿನಲ್ಲಿ ಸುಮಾರು 30-40 ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲವರು ಹಿಂಬಾಗಿಲಿನಿಂದ ಹೊರಬಂದು ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಇನ್ನೂ ಹಲವರು ಒಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಘಟನೆಯಲ್ಲಿ ಗೋದಾಮು ಕೆಲವು ವಾಹನಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಬೆಂಕಿ ನಂದಸುವ ಕಾರ್ಯದಲ್ಲಿ ತೊಡಗಿವೆ.