ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದ.ಕ ಜಿಲ್ಲಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯ ಸಿದ್ಧತೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 1860 ಮತಗಟ್ಟೆಗಳಿದ್ದು, ಗರಿಷ್ಟ 18 ಸುತ್ತುಗಳು ಮತ ಎಣಿಕೆ ನಡೆಯಲಿದೆ. ಸುರತ್ಕಲ್ ಎನ್ಐಟಿಕೆಯಲ್ಲಿ ಮತ ಎಣಿಕೆಯ ಸಿದ್ಧತೆ ಪೂರ್ಣಗೊಂಡಿದೆ. ಎಣಿಕೆಯ ಕೊಠಡಿಗಳಲ್ಲಿ
ವೆಬ್ ಕಾಸ್ಟಿಂಗ್ ವ್ಯವಸ್ಥೆ ಮತ್ತು ಸಿಸಿಟಿವಿಗಳನ್ನು ಆಳವಡಿಸಲಾಗಿದೆ. ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ, ಅಪರಾಹ್ನ 1 ರಿಂದ 2 ಗಂಟೆಯ ಒಳಗಡೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೇ 13ರಂದು ಮತ ಎಣಿಕೆ ಕೇಂದ್ರವು ಸೇರಿದಂತೆ ಜಿಲ್ಲೆಯಾದ್ಯಂತ ವಿಜಯೋತ್ಸವ ಮಾಡುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸುವ ಸಲುವಾಗಿ ಕಲಂ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದ.ಕ. ಜಿಪಂ ಸಿಇಒ ಡಾ.ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ, ಮನಪಾ ಆಯುಕ್ತ ಚೆನ್ನ ಬಸಪ್ಪ ಉಪಸ್ಥಿತರಿದ್ದರು.