ಮಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಿಗೆ ಮೇ 10 ರಂದು ಬೆಳಿಗ್ಗೆ 07 ರಿಂದ ಸಂಜೆ 06 ಗಂಟೆಯವರೆಗೆ ಮತದಾನ ಜರುಗಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ತಿಳಿಸಿದರು.
ಅವರು ಮೇ.9ರ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 17,81,389 ಜನ ಮತದಾರರು ತಮ್ಮ ಮತದಾನ ಹಕ್ಕು
ಚಲಾಯಿಸಲಿದ್ದು, 1,860 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 8,70,991 ಪುರುಷ ಮತದಾರರು ಮತ್ತು 9,10,314 ಮಹಿಳಾ ಮತದಾರರು, 84 ತೃತೀಯ ಲಿಂಗಿ ಮತದಾರರು ಸೇರಿ ಒಟ್ಟು 17,81,389 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಒಟ್ಟು 1,860 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳ್ತಂಗಡಿ 241, ಮೂಡಬಿದರೆ 221, ಮಂಗಳೂರು ಉತ್ತರ 244, ಮಂಗಳೂರು ದಕ್ಷಿಣ 224, ಮಂಗಳೂರು 210, ಬಂಟ್ವಾಳ 249, ಪುತ್ತೂರು 220 ಹಾಗೂ ಸುಳ್ಯದಲ್ಲಿ 231 ಮತಗಟ್ಟೆಗಳಿವೆ.
ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್: ಕ್ಲಿಷ್ಟ ಮತಗಟ್ಟೆಗಳನ್ನೊಳಗೊಂಡಂತೆ ಈ ಬಾರಿ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಒಟ್ಟು 939 ಮತಗಟ್ಟೆಗಳಲ್ಲಿ ವೆಬ್ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 164 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರನ್ನು, ಉಳಿದ ಮತಗಟ್ಟೆಗಳಲ್ಲಿ ಸಿ.ಪಿ.ಎಂ.ಎಫ್ಗಳನ್ನು ನಿಯೋಜಿಸಲಾಗಿದೆ. ಮತದಾನದ ದಿನವಾದ ಮೇ. 10ರ ಸಂಜೆ 6 ಗಂಟೆಯ ವರೆಗೆ ಸಮೀಕ್ಷೆ ನಡೆಸುವುದನ್ನು ನಿಷೇಧಿಸಲಾಗಿದೆ.
ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್: ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಆಯಾ ವಿಧಾನಸಭಾ ಮತಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ಮಾಡಲಾಗಿದೆ.
ಎನ್ಐಟಿಕೆಯಲ್ಲಿ ಮತ ಎಣಿಕಾ ಕೇಂದ್ರ:
ಮತದಾನ ಪೂರ್ಣಗೊಂಡ ನಂತರ ಮತದಾನವಾದ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರವಾದ ಸುರತ್ಕಲ್ನ ಎನ್ಐಟಿಕೆಯಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದ್ದು, ಮೇ 13 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಈ ದಾಖಲೆಯಿದ್ದರೆ ಮತ ಚಲಾಯಿಸಬಹುದು: ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ಮತ ಚಲಾಯಿಸಲು ಈ ಕೆಳಕಂಡ ಪರ್ಯಾಯ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ. ಮತದಾರ ಆಧಾರ ಕಾರ್ಡ್, ಎಂ.ಎನ್.ಆರ್.ಇ.ಜಿ.ಎ. ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ಪ್ಯಾನ್ ಕಾರ್ಡ್, ಎನ್.ಪಿ.ಆರ್ ನ ಅಡಿಯಲ್ಲಿ ಆರ್.ಜಿ.ಐ. ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಸ್ಪೋರ್ಟ್, ಭಾವಚಿತ್ರ ಇರುವ ಪಿಂಚಣಿ ದಾಖಲೆ, ಸೇವಾ ಗುರುತಿನ ಚೀಟಿ (ಕೇಂದ್ರ, ರಾಜ್ಯ ಸರ್ಕಾರ, ಪಿಎಸ್ಯು ಗಳ ಗುರುತಿನ ಚೀಟಿ) ಎಂ.ಪಿ, ಎಂ.ಎಲ್.ಎ, ಎಂ.ಎಲ್.ಸಿ. ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ ದಾಖಲೆ.
ಮತದಾರರು ವೋಟರ್ ಸ್ಲಿಪ್ ಜೊತೆಗೆ ಎಪಿಕ್ ಕಾರ್ಡ್ ಅಥವಾ ಮೇಲೆ ತಿಳಿಸಿದ ಪರ್ಯಾಯ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಕಡ್ಡಾಯವಾಗಿ ಮತಗಟ್ಟೆಯಲ್ಲಿ ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ದೀಪ್ ಕುಮಾರ್ ಜೈನ್ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಗೋಷ್ಠಿಯಲ್ಲಿದ್ದರು.