ಸುಳ್ಯ: ಜನರ ಸಮಸ್ಯೆ ಆಲಿಸಲು ಸಹಕಾರಿ ಆಗುವ ನಿಟ್ಟಿನಲ್ಲಿ ನಾನು ಪ್ರತೀ 15 ದಿನಗಳಿಗೊಮ್ಮೆ ಪ್ರತೀ ತಾಲೂಕು ಕಛೇರಿಗಳಿಗೆ ಭೇಟಿ ನೀಡುತ್ತೇನೆ. ಈ ವೇಳೆ ತಾಲೂಕಿನ ಸಾರ್ವಜನಿಕರು ನನ್ನನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಅವರು ಬುಧವಾರ ಸುಳ್ಯ ತಾಲೂಕು ಕಛೇರಿಗೆ ಭೇಟಿ ನೀಡಿ ಇಲಾಖಾಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಸಾರ್ವಜನಿಕರು ನನ್ನನ್ನು ಭೇಟಿಯಾಗಲು ಮಂಗಳೂರಿಗೆ ಬರುತ್ತಿರುತ್ತಾರೆ. ಆದರೆ ಇದು ಅವರಿಗೂ ತೊಂದರೆ, ಆದ್ದರಿಂದ ನಾನು ತಾಲೂಕು ಕಛೇರಿಗಳಿಗೆ 15 ದಿನಗಳಿಗೊಮ್ಮೆ ಭೇಟಿ ನೀಡುತ್ತೇನೆ. ಇದನ್ನು ಮಾಧ್ಯಮಗಳ ಮೂಲಕ ತಿಳಿಸುತ್ತೇನೆ. ಈ ವೇಳೆ ತಾಲೂಕಿನ ನಾಗರಿಕರು ತಾಲೂಕು ಕಛೇರಿಗೆ ಬಂದು ನನ್ನನ್ನು ಭೇಟಿಯಾಗಿ ಅಹವಾಲು ಸಲ್ಲಿಸಬಹುದು ಎಂದರು.
ಇಲಾಖಾಧಿಕಾರಿಗಳ ಸಭೆ;
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸುಳ್ಯ ತಾಲೂಕು ಕಛೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆ ನಡೆಸಿದರು. ತಾಲೂಕಿನ ನೆರೆ ಬಾಧಿತ ಪ್ರದೇಶಗಳ ನೋಡೆಲ್ ಅಧಿಕಾರಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ, ಅನಾಹುತ ಎದುರಿಸಲು ಬೇಕಾಗುವ ಸಿದ್ಧತೆಗಳನ್ನು ಮೊದಲೇ ಮಾಡಿಕೊಳ್ಳಿ, ಇತರೆ ಇಲಾಖೆಗಳ ನೆರವು ಪಡೆಯಿರಿ ಎಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು ನಡೆಸಲಾದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು. ಮಳೆ, ಗಾಳಿ ಸಂದರ್ಭದಲ್ಲಿ ವಿದ್ಯುತ್ ಲೈನ್ಗಳಿಗೆ ಹಾನಿಯಾದಲ್ಲಿ ಕೂಡಲೇ ಮೆಸ್ಕಾಂ ನವರು ಮುಂಜಾಗ್ರತೆ ವಹಿಸಿ ದುರಸ್ತಿಗೆ ಕ್ರಮಕೈಗೊಳ್ಳಬೇಕು. ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದಲ್ಲಿ ತೆರವು ಕಾರ್ಯಕ್ಕೂ ಸಂಬAಧಿಸಿದ ಇಲಾಖೆ ಸಿದ್ಧರಾಗಿರಬೇಕು ಎಂದರು.
ಅಧಿಕಾರಿಗಳಿಗೆ ಸೂಚನೆ;
ಪ್ರಾಕೃತಿಕ ವಿಕೋಪ ಎದುರಿಸಲು ಈಗಾಗಲೇ ತಾಲೂಕು ವ್ಯಾಪ್ತಿಯಲ್ಲಿ ತಯಾರಿ ನಡೆಸಲಾಗಿದೆ. ನೋಡೆಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಉಂಟಾಗಬಹುದಾದ ಹಾಗೂ ಸಮಸ್ಯೆ ಆದಲ್ಲಿ ಎದುರಿಸಬೇಕಾಗುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಿ. ಸಮಸ್ಯೆ ಉಂಟಾದಲ್ಲಿ ಕೂಡಲೇ ಸ್ಪಂದಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂಜಾಗ್ರತೆ ವಹಿಸಿ, ಗ್ರಾ.ಪಂ. ಪಿಡಿಒಗಳು ನೋಡೆಲ್ ಅಧಿಕಾರಿಗಳಿಗೆ ಪೂರಕ ಮಾಹಿತಿ ನೀಡುವಂತೆ ಸೂಚಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಮಹೇಶ್ಚಂದ್ರ, ಸುಳ್ಯ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್, ವಲಯ ಅರಣ್ಯಾಧಿಕಾರಿ ಮಂಜುನಾಥ್ ಎನ್., ಸುಳ್ಯ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ.ಎಸ್., ಜಿ.ಪಂ. ಇಂಜಿನಿಯರ್ ಭರತ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ಮಂಜುನಾಥ್ ಸ್ವಾಗತಿಸಿದರು. ಉಪ ತಹಶೀಲ್ದಾರ್ ಚಂದ್ರಕಾಂತ್ ವಂದಿಸಿದರು.
ಸಾರ್ವಜನಿಕರಿಂದ ಮನವಿ;
ಸುಳ್ಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಡಿಸಿ ಸಂಬಂಧಿಸಿದ ಇಲಾಖೆಗಳಿಗೆ ಪರಿಹಾರಕ್ಕೆ ಸೂಚಿಸಿದರು.